ಕ್ಯೂಟೋ( ಈಕ್ವೆಡಾರ್):ಇತ್ತೀಚೆಗಷ್ಟೇ ಈಕ್ವೆಡಾರ್ನ ಕರಾವಳಿ ನಗರವಾದ ಗುವಯಾಕ್ವಿಲ್ನ ಕಾರಾಗೃಹದಲ್ಲಿ ಎರಡು ಗ್ಯಾಂಗ್ಗಳ ನಡುವೆ ಪರಸ್ಪರ ಸಂಘರ್ಷ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ನೂರು ದಾಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಐವರ ಮೃತದೇಹಗಳು ಶಿರಚ್ಛೇದನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಈಕ್ವೆಡಾರ್ನ ಪ್ರಿಸನ್ ಸರ್ವೀಸ್ ಇಲಾಖೆ ಮಾಹಿತಿ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಇಲಾಖೆ ನೂರಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದು, 52 ಮಂದಿ ಗಾಯಗೊಂಡಿದ್ದಾರೆ ಎಂದಿದೆ.
ಇದಕ್ಕೂ ಮೊದಲು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದವು. ಈಗ ನಿಖರ ಅಂಕಿ - ಅಂಶಗಳು ಬಹಿರಂಗವಾಗಿವೆ. ಪ್ರಾದೇಶಿಕ ಪೊಲೀಸ್ ಕಮಾಂಡರ್ ಫೌಸ್ಟೋ ಬುನೆವೋ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಾರಾಗೃಹದ ಪೈಪ್ಲೈನ್ನಲ್ಲಿ ಕೆಲವು ಮೃತದೇಹಗಳು ಪತ್ತೆಯಾಗಿವೆ. ಅವುಗಳನ್ನು ಗುರ್ತಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
ಲೋಬೋಸ್ ಮತ್ತು ಲಾಸ್ ಚೊನೆರೋಸ್ ಗ್ಯಾಂಗ್ಗಳ ನಡುವೆ ವಿವಾದದಿಂದಾಗಿ ಹಿಂಸಾಚಾರ ನಡೆದಿದ್ದು, ಹಿಂಸಾಚಾರದಲ್ಲಿ ಗನ್, ಚಾಕುಗಳು, ಸ್ಫೋಟಕಗಳನ್ನು ಬಳಸಲಾಗಿದೆ. ಇದರಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಜೈಲಿನಲ್ಲಿ ಗನ್, ಸ್ಫೋಟಕ, ಚಾಕುಗಳಿಂದ ಮಾರಾಮಾರಿ: 24 ಮಂದಿ ಸಾವು, 48 ಮಂದಿಗೆ ಗಾಯ