ವಾಷಿಂಗ್ಟನ್(ಅಮೆರಿಕ): ತೀವ್ರ ಚಳಿಗಾಲದ ಮೊದಲೇ ಅಗತ್ಯ ಸಾಮಗ್ರಿಗಳ ತೀವ್ರ ಕೊರತೆಯನ್ನು ಅಫ್ಘಾನಿಸ್ತಾನ ಎದುರಿಸುತ್ತಿದೆ. ತಾಲಿಬಾನ್ ವಶವಾಗುವುದಕ್ಕೆ ಮೊದಲು ಅಫ್ಘಾನಿಸ್ತಾನ ಅಂತಾರಾಷ್ಟ್ರೀಯ ನೆರವಿನ ಮೇಲೆ ಅವಲಂಬಿತವಾಗಿತ್ತು. ಈಗ ಹಲವು ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳು ನೆರವು ನೀಡುವುದನ್ನು ನಿಲ್ಲಿಸಿವೆ.
ಇದರಿಂದಾಗಿ ಅಫ್ಘಾನಿಸ್ತಾನದ ಆರ್ಥಿಕತೆ ಕುಸಿಯುತ್ತಿದೆ. ಹೀಗಾಗಿ ವಿಶ್ವಸಂಸ್ಥೆ ಮಾನವೀಯ ಮುಖ್ಯಸ್ಥರು ಈ ವಾರಾಂತ್ಯದಲ್ಲಿ ನಡೆದ ವಿಶ್ವದ 20 ರಾಷ್ಟ್ರಗಳ ಪ್ರಮುಖ ನಾಯಕರ ಸಭೆಯಲ್ಲಿ ನೆರವು ತಲುಪಿಸಬೇಕೆಂಬ ಮನವಿ ಮಾಡಿದ್ದಾರೆ.
ಅಫ್ಘಾನಿಸ್ತಾನದ ಬಗ್ಗೆ ಚಿಂತಿಸಬೇಕಾಗಿದೆ. ಅಫ್ಘಾನಿಸ್ತಾನದ ಆರ್ಥಿಕತೆಯು ಕುಸಿಯುತ್ತಿದೆ. ಭಾರಿ ಪ್ರಮಾಣದ ಹಿಮವು ಈಗಾಗಲೇ ಬೀಳಲು ಪ್ರಾರಂಭವಾಗಿದ್ದು, ಆಹಾರದ ಕೊರತೆ ಎದುರಾಗಿದೆ.
ಮಾರ್ಟಿನ್ ಗ್ರಿಫಿತ್ಸ್ ಶುಕ್ರವಾರದಂದು ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಅಫ್ಘಾನಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ ಎಂದು ಹೇಳಿದರು. ಈ ಎಲ್ಲ ಕಾರಣಗಳಿಂದ ಅಫ್ಘಾನಿಸ್ತಾನದ ಆರ್ಥಿಕತೆ ತೀವ್ರವಾಗಿ ಕುಸಿಯತೊಡಗಿದ್ದು, ಇತರ ರಾಷ್ಟ್ರಗಳು ಸಹಕರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಆಹಾರದ ಕೊರತೆಯು ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂದು ಗ್ರಿಫಿತ್ಸ್ ಎಚ್ಚರಿಸಿದ್ದಾರೆ. ಇದು ರೋಗ - ರುಜಿನೆ ಮತ್ತು ಸಾವಿಗೆ ಕಾರಣವಾಗುತ್ತದೆ. ಕೆಲವೆಡೆ ಸೂಕ್ತ ಕ್ರಮ ಕೈಗೊಳ್ಳಲಾಗದೇ, ಈಗಾಗಲೇ ಸಾವು ನೋವು ಸಂಭವಿಸಿದೆ. ವಿಶ್ವ ಆಹಾರ ಕಾರ್ಯಕ್ರಮವು ಈಗ ಅಫ್ಘಾನಿಸ್ತಾನದಲ್ಲಿ ನಾಲ್ಕು ಮಿಲಿಯನ್ ಜನರಿಗೆ ಆಹಾರವನ್ನು ನೀಡುತ್ತಿದೆ. ಆದರೆ ಚಳಿಗಾಲದ ಭೀಕರ ಪರಿಸ್ಥಿತಿಗಳು ಮತ್ತು ಆರ್ಥಿಕ ಕುಸಿತದ ಕಾರಣದಿಂದಾಗಿ ಇನ್ನೂ 12 ಮಿಲಿಯನ್ ಆಫ್ಘನ್ನರಿಗೆ ಆಹಾರವನ್ನು ಒದಗಿಸಬೇಕಾಗುತ್ತದೆ.