ವಾಷಿಂಗ್ಟನ್: ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಸಾ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ಹೆಸರಿನ ರೊಬಾಟಿಕ್ ರೋವರ್ ಅನ್ನು ಯಶಸ್ವಿಯಾಗಿ ನಾಸಾ ಇಳಿಸಿದೆ.
ಮಂಗಳ ಗ್ರಹದಲ್ಲಿನ ಸೂಕ್ಷ್ಮಾಣು ಜೀವಿಗಳ ಕುರುಹು, ಅಲ್ಲಿನ ಮಣ್ಣು ಹಾಗೂ ವಾತಾವರಣದ ಬಗ್ಗೆ ಅಧ್ಯಯನ ನಡೆಸಲು ಈ ರೋವರ್ ಸಹಾಯಕವಾಗಲಿದೆ.
ಕಳೆದ 7 ತಿಂಗಳ ಹಿಂದೆ ಫ್ಲೋರಿಡಾದ 'ಕೇಪ್ ಕ್ಯಾನವರೆಲ್ ಸ್ಟೇಷನ್'ನಿಂದ ಪರ್ಸೆವೆರೆನ್ಸ್ ರೋವರ್ ಹೊತ್ತ ರಾಕೆಟ್ ಉಡಾವಣೆ ಮಾಡಲಾಗಿತ್ತು. ಇದೀಗ 7 ತಿಂಗಳ ಬಳಿಕ ರೋವರ್ ಮಂಗಳ ಅಂಗಳ ತಲುಪಿದೆ. ಮಂಗಳ ಅಂಗಳ ತಲುಪಿದ ಬಳಿಕ ಅಲ್ಲಿನ ಮೊದಲ ಫೋಟೋವನ್ನು ರೋವರ್ ಕಳುಹಿಸಿದೆ.
ಹಲವು ಅಡೆತಡೆಗಳನ್ನು ಎದುರಿಸಿ ರೋವರ್ ಯಶಸ್ವಿಯಾಗಿ ಮಂಗಳ ಗ್ರಹದಲ್ಲಿ ಇಳಿದಿದೆ. ಆದ್ರೆ ಮಿಷನ್ ಈಗಷ್ಟೇ ಶುರುವಾಗಿದೆ ಎಂದು ನಾಸಾ ಟ್ವೀಟ್ ಮಾಡಿದೆ.
ರೋವರ್ ಮಂಗಳ ಗ್ರಹದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ನಾಸಾ ವಿಜ್ಞಾನಿಗಳು ಹಾಗೂ ತಜ್ಞರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.