ವಾಷಿಂಗ್ಟನ್ (ಯುಎಸ್):ಪಾಕಿಸ್ತಾನದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಕಾರ್ಯಾಚರಣೆಯ ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಹಣಕಾಸು ಸಂಬಂಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಪಡಿಸಿರುವುದು ಸ್ವಾಗತಾರ್ಹ ಎಂದು ಯುಎಸ್ ಶನಿವಾರ ಹೇಳಿದೆ. ಆದರೆ 2008 ರ ಮುಂಬೈ ಹತ್ಯಾಕಾಂಡ ಸೇರಿ, ಹಲವು ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಆತನನ್ನು ಇನ್ನಷ್ಟು ಹೊಣೆಗಾರನನ್ನಾಗಿ ಮಾಡಬೇಕೆಂದು ಹೇಳಿದೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಖ್ವಿಗೆ ಭಯೋತ್ಪಾದನೆಯಲ್ಲಿ ಭಾಗಿ ಹಾಗೂ ಹಣಕಾಸು ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಶುಕ್ರವಾರ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿರುವ ಭಯೋತ್ಪಾದಕರನ್ನು ನ್ಯಾಯಾಂಗಕ್ಕೆ ಕರೆತರುವಂತೆ ಇಸ್ಲಾಮಾಬಾದ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ.