ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಜೊತೆಯಲ್ಲೇ ನಡೆದ ಸಾರ್ಕ್ ಒಕ್ಕೂಟ ರಾಷ್ಟ್ರಗಳ ವಿದೇಶಾಂಗ ಸಚಿವರ ವಾರ್ಷಿಕ ಸಭೆಯಲ್ಲಿ ಹೈಡ್ರಾಮಾ ನಡೆದಿದೆ.
ಕಾಶ್ಮೀರ ವಿಚಾರದಲ್ಲಿ ಹಲವು ಬಾರಿ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಗುರುವಾರ ನಡೆದ ಸಾರ್ಕ್ ಸಭೆಯಲ್ಲಿ ಬೃಹನ್ನಾಟಕ ಮಾಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಷಣ ಮುಕ್ತಾಯವಾಗುವವರೆಗೂ ಸಭೆಗೆ ಪ್ರವೇಶಿಸುವುದಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪಟ್ಟು ಹಿಡಿದಿದ್ದರು. ಕೊನೆಯಲ್ಲಿ ಖುರೇಷಿ ಅನುಪಸ್ಥಿತಿಯಲ್ಲಿ ಸಾರ್ಕ್ ಸಭೆ ಆರಂಭಗೊಂಡಿದೆ.
ಭಾರತದ ವಿದೇಶಾಂಗ ಸಚಿವರು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ಭಾರತದ ನಿಲುವನ್ನು ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿ ಹೊರಬಂದ ಬಳಿಕವಷ್ಟೇ ಪಾಕ್ ವಿದೇಶಾಂಗ ಸಚಿವರು ಆಗಮಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಳ್ಳದಿರುವ ವಿಚಾರಕ್ಕೆ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್(ಪಿಟಿಐ) ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರ ವಿಚಾರದಲ್ಲಿ ಸಭೆಯನ್ನು ಬಹಿಷ್ಕರಿಸಿದ್ದಾಗಿ ಹೇಳಿದೆ.
ಸಾರ್ಕ್ ಸಭೆ ಮುಕ್ತಾಯವಾದ ಬಳಿಕ ಟ್ವೀಟ್ ಮಾಡಿರುವ ಎಸ್.ಜೈಶಂಕರ್, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ಉಭಯ ದೇಶಗಳ ಸಂಪೂರ್ಣ ಸಹಕಾರದ ಅಗತ್ಯತೆಯನ್ನು ಉಲ್ಲೇಖಿಸಿದ್ದಾರೆ.