ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಅಪ್ರಸ್ತುತ ಮತ್ತು ಬೇಜವಾಬ್ದಾರಿಯುತ ಟೀಕೆಗಳನ್ನು ಮಾಡಿದ್ದಕ್ಕಾಗಿ ಪಾಕಿಸ್ತಾನದ ವಿರುದ್ಧ ಯುಎನ್ ರಾಯಭಾರಿ ವಾಗ್ದಾಳಿ ನಡೆಸಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಗಂಭೀರ ಚರ್ಚೆಯ ವೇದಿಕೆಯಾಗಿದೆ. ಆದರೆ, ಕ್ಷುಲ್ಲಕ ಆರೋಪಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದು ಯುಎನ್ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಟಿ ಎಸ್ ತಿರುಮೂರ್ತಿ ಅವರು ಭದ್ರತಾ ಮಂಡಳಿಯ ಸದಸ್ಯತ್ವದಲ್ಲಿ ಸಮಾನ ಪ್ರಾತಿನಿಧ್ಯ ಮತ್ತು ಹೆಚ್ಚಳದ ಪ್ರಶ್ನೆ’ ಕುರಿತು ಮಾತನಾಡಿದಾಗ ಪಾಕ್ ನಡೆಯನ್ನ ಕಟುವಾಗಿ ಟೀಕಿಸಿದರು.
ಯುಎನ್‌ನಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ತಮ್ಮ ಭಾಷಣದಲ್ಲಿ ನಿಯಂತ್ರಣ ರೇಖೆ ಉಲ್ಲೇಖಿಸಿ ಭಾರತದ ಯುಎನ್‌ಎಸ್‌ಸಿ ಸದಸ್ಯತ್ವಕ್ಕೆ ವಿರೋಧ ವ್ಯಕ್ತಪಡಿಸಿದರು.
ಪಾಕಿಸ್ತಾನದ ಪ್ರತಿನಿಧಿ ಮಾಡಿದ ಅಪ್ರಸ್ತುತ ಮತ್ತು ಬೇಜವಾಬ್ದಾರಿಯುತ ಟೀಕೆಗಳಿಗೆ ಪ್ರತಿಕ್ರಿಯಿಸುವ ಮೂಲಕ ಈ ಅಸೆಂಬ್ಲಿಯ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ಅದು ಭಾರತವನ್ನು ಉಲ್ಲೇಖಿಸಿದಾಗಲೆಲ್ಲಾ ಪ್ರಾಣಿಯಂತೆ ವರ್ತಿಸುತ್ತದೆ (ಪಾವ್ಲೋವಿಯನ್). ಇದು ಗಂಭೀರ ಚರ್ಚೆಯ ವೇದಿಕೆಯಾಗಿದೆ. ಕ್ಷುಲ್ಲಕ ಆರೋಪಗಳಲ್ಲ ಎಂದು ತಿರುಮೂರ್ತಿ ತಿರುಗೇಟು ನೀಡಿದರು.
ಪ್ರಸ್ತುತ, ಯುಎನ್‌ಎಸ್‌ಸಿ ಐದು ಖಾಯಂ ಸದಸ್ಯರು ಮತ್ತು 10 ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಸಮಕಾಲೀನ ಜಾಗತಿಕ ವಾಸ್ತವತೆಗೆ ಶಾಶ್ವತ ಸದಸ್ಯರ ಸಂಖ್ಯೆ ಹೆಚ್ಚಿಸುವ ಬೇಡಿಕೆ ಹೆಚ್ಚುತ್ತಿದೆ. ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜರ್ಮನಿ ಮತ್ತು ಜಪಾನ್ ಯುಎನ್‌ಎಸ್‌ಸಿಯ ಶಾಶ್ವತ ಸದಸ್ಯತ್ವಕ್ಕಾಗಿ ಪ್ರಬಲ ಸ್ಪರ್ಧಿಗಳಾಗಿದ್ದು, ಇದು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯ ನಿರ್ವಹಣೆಯ ಪ್ರಾಥಮಿಕ ಜವಾಬ್ದಾರಿ ಹೊಂದಿದೆ.