ನ್ಯೂಯಾರ್ಕ್:ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳಾದ ಜೈಶ್- ಇ- ಮೊಹಮ್ಮದ್ ಮತ್ತು ಲಷ್ಕರ್-ಇ-ತೊಯ್ಬಾ ತಮ್ಮ ತರಬೇತುದಾರರನ್ನು ತಾಲಿಬಾನ್ ಮತ್ತು ಅಲ್-ಖೈದಾಗೆ ಸಹಕಾರ ನೀಡುವುದು ಮಾತ್ರವಲ್ಲದೇ ಉದ್ದೇಶಿತ ಹತ್ಯೆ ನಡೆಸಲು ಅಫ್ಘಾನಿಸ್ತಾನಕ್ಕೆ ಕಳುಹಿಸುತ್ತಿದ್ದಾರೆ ಎಂದು ಯುಎನ್ ಸೆಕ್ಯುರಿಟಿ ಕೌನ್ಸಿಲ್ ವರದಿ ನೀಡಿದೆ.
ಯುಎನ್‌ಎಸ್‌ಸಿ ಮಾನಿಟರಿಂಗ್ ತಂಡವು ಅಫ್ಘಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ತಾಲಿಬಾನ್ ಮತ್ತು ಇತರ ಸಂಬಂಧಿತ ಘಟಕಗಳ ಬಗ್ಗೆ ತನ್ನ 11ನೇ ವರದಿಯನ್ನು ಕಳೆದ ವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಮಿತಿಗೆ ಸಲ್ಲಿಸಿತ್ತು.
ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್- ಇ -ತೊಯ್ಬಾ ಭಯೋತ್ಪಾದಕ ಹೋರಾಟಗಾರರನ್ನು ಅಫ್ಘಾನಿಸ್ತಾನಕ್ಕೆ ಕಳ್ಳಸಾಗಣೆ ಮಾಡಲು ಅನುಕೂಲ ಮಾಡಿಕೊಡುತ್ತಾರೆ. ಅವರು ಸಂಘಟನೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳ ಸಲಹೆಗಾರರು, ತರಬೇತುದಾರರು ಮತ್ತು ತಜ್ಞರಾಗಿ ಕಾರ್ಯನಿರ್ವಹಿಸುತ್ತಾರೆ. ಸರ್ಕಾರದ ಅಧಿಕಾರಿಗಳು ಮತ್ತು ಇತರರ ವಿರುದ್ಧ ಉದ್ದೇಶಿತ ಹತ್ಯೆಗಳನ್ನು ನಡೆಸಲು ಎರಡೂ ಗುಂಪುಗಳು ಕಾರಣವಾಗಿವೆ ಎಂದು ಯುಎನ್‌ಎಸ್‌ಸಿ ವರದಿ ಮಾಡಿದೆ.
ಲಷ್ಕರ್ನ 800 ಮತ್ತು ಜೈಶ್ನ ಸುಮಾರು 200 ಸಶಸ್ತ್ರ ಹೋರಾಟಗಾರರನ್ನು ಹೊಂದಿದ್ದು, ನಂಗರ್ಹಾರ್ ಪ್ರಾಂತ್ಯದ ಮೊಹಮ್ಮದ್ ದರಾಹ್, ದೂರ್ ಬಾಬಾ ಮತ್ತು ಶೆರ್ಜಾದ್ ಜಿಲ್ಲೆಗಳಲ್ಲಿ ತಾಲಿಬಾನ್ ಪಡೆಗಳೊಂದಿಗೆ ನೆಲೆಸಿದ್ದಾರೆ. ಪಾಕಿಸ್ತಾನದ ಮೊಹಮಂಡ್ ದರಾಹ್‌ನ ಗಡಿ ಪ್ರದೇಶದ ಸಮೀಪವಿರುವ ಲಾಲ್ಪುರ ಜಿಲ್ಲೆಯಲ್ಲಿಯೂ ತೆಹ್ರಿಕ್ -ಎ -ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ತನ್ನ ಅಸ್ತಿತ್ವ ಕಾಯ್ದುಕೊಂಡಿದೆ ಎಂದು ಯುಎನ್‌ಎಸ್‌ಸಿ ತಂಡ ತಿಳಿಸಿದೆ.
ಕುನಾರ್ ಪ್ರಾಂತ್ಯದಲ್ಲಿ, ಲಷ್ಕರ್ ಇನ್ನೂ 220 ಮಂದಿಯನ್ನು ಉಳಿಸಿಕೊಂಡಿದ್ದಾರೆ. ಜೈಶ್ 30 ಜನರನ್ನು ಹೊಂದಿದೆ. ಇವರೆಲ್ಲರೂ ತಾಲಿಬಾನ್ ಪಡೆಗಳಲ್ಲಿ ಹಂಚಿಹೋಗಿದ್ದಾರೆ. ಟಿಟಿಪಿ, ಜೈಶ್ ಮತ್ತು ಲಷ್ಕರ್ ಪೂರ್ವ ಪ್ರಾಂತ್ಯಗಳಾದ ಕುನಾರ್, ನಂಗರ್‌ಹಾರ್ ಮತ್ತು ನುರಿಸ್ತಾನಗಳಲ್ಲಿ ಇದ್ದು, ಅವು ಅಫ್ಘಾನ್ ತಾಲಿಬಾನ್‌ನ ಅಡಿ ಕಾರ್ಯನಿರ್ವಹಿಸುತ್ತವೆ ಎಂದು ಯುಎನ್‌ಎಸ್‌ಸಿ ಮಾನಿಟರಿಂಗ್ ತಂಡ ತಿಳಿಸಿದೆ.
ಅಲ್-ಖೈದಾದ ಹಲವು ಪ್ರಮುಖ ವ್ಯಕ್ತಿಗಳು ಕೊಲ್ಲಲ್ಪಟ್ಟ ಸಮಯದಲ್ಲಿ ಅಲ್-ಖೈದಾದ ಹಿರಿಯ ನಾಯಕತ್ವವು ಅಫ್ಘಾನಿಸ್ತಾನದಲ್ಲಿ ಉಳಿದಿತ್ತು. ನೂರಾರು ಸಶಸ್ತ್ರ ಕಾರ್ಯಕರ್ತರು, ಭಾರತೀಯ ಉಪಖಂಡದ ಅಲ್-ಖೈದಾ ಮತ್ತು ಹಲವು ವಿದೇಶಿ ಭಯೋತ್ಪಾದಕ ಗುಂಪುಗಳು ತಾಲಿಬಾನ್ ಜೊತೆ ಒಗ್ಗೂಡಿಕೊಂಡಿದ್ದವು ಎಂದು ವರದಿ ಹೇಳಿದೆ.