ವಾಷಿಂಗ್ಟನ್ :ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿ ಶ್ವೇತ ಭವನದ ವಿಳಾಸಕ್ಕೆ ಮುಚ್ಚಿದ ಲಕೋಟೆಯಲ್ಲಿ ಅನಾಮಧೇಯ ವ್ಯಕ್ತಿಯಿಂದ ಬಂದಿದ್ದ ವಿಷ ಲೇಪಿತ ಪತ್ರವನ್ನು ಫೆಡರಲ್ ಅಧಿಕಾರಿಗಳು ತಡೆದಿದ್ದಾರೆ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್‌ಬಿಐ, ಸಿಕ್ರೆಟ್ ಸರ್ವಿಸ್ ಮತ್ತು ಯುಎಸ್ ಅಂಚೆ ತಪಾಸಣೆ ವಿಭಾಗ ಪತ್ರವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಕ್ಯಾಸ್ಟರ್ ಬೀನ್ಸ್‌ನಲ್ಲಿ ನೈಸರ್ಗಿಕವಾಗಿ ಕಂಡುಬರುವ ರಿಸಿನ್ ವಿಷ ಲೇಪಿತವಾಗಿರುವುದು ಪತ್ತೆಯಾಗಿದೆ. ಯಾರು ಆ ಪತ್ರವನ್ನು ಕಳಿಸಿದ್ದರು ಎಂಬುದು ತಿಳಿದು ಬಂದಿಲ್ಲ, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪತ್ರದಿಂದ ಸಾರ್ವಜನಿಕ ಸುರಕ್ಷತೆಗೆ ಯಾವುದೇ ಸಮಸ್ಯೆ ಇಲ್ಲವೆಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
2018 ರಲ್ಲಿ ಕೂಡ ಇದೇ ರೀತಿ ಅಧ್ಯಕ್ಷರನ್ನು ಗುರಿಯಾಗಿಸಿ ವಿಷ ಲೇಪಿತ ಪತ್ರಗಳನ್ನು ಕಳಿಸುತ್ತಿದ್ದ ಪ್ರಕರಣದಲ್ಲಿ ನೌಕಾ ಪಡೆಯ ತಂತ್ರಜ್ಞರೊಬ್ಬರನ್ನು ಬಂಧಿಸಲಾಗಿತ್ತು. ವಿಲಿಯಂ ಕ್ಲೈಡ್ ಅಲೆನ್ III ಎಂಬ ವ್ಯಕ್ತಿ, ಕ್ಯಾಸ್ಟರ್ ಬೀನ್ಸ್‌ನೊಂದಿಗೆ ಮುಚ್ಚಿದ ಲಕೋಟೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಮತ್ತು ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್, ಸಿಐಎ ನಿರ್ದೇಶಕ ಗಿನಾ ಹಾಸ್ಪೆಲ್, ನೌಕಾ ದಳದ ಮುಖ್ಯಸ್ಥ ಅಡ್ಮಿನ್ ಜಾನ್ ರಿಚರ್ಡ್‌ಸನ್ ಮತ್ತು ಆಗಿನ ವಾಯುಪಡೆಯ ಕಾರ್ಯದರ್ಶಿ ಹೀದರ್ ವಿಲ್ಸನ್ಗೆ ಪತ್ರಗಳನ್ನು ಕಳುಹಿಸುತ್ತಿದ್ದ. ಆ ಪತ್ರಗಳನ್ನು ತಡೆ ಹಿಡಿಯಲಾಗಿತ್ತು ಮತ್ತು ಅದರಿಂದ ಯಾವುದೇ ಸಾವು ನೋವುಗಳು ಸಂಭವಿಸಿರಲಿಲ್ಲ.
2014 ರಲ್ಲಿ, ಮಿಸ್ಸಿಸ್ಸಿಪ್ಪಿಯ ವ್ಯಕ್ತಿಯೊಬ್ಬ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಮತ್ತು ಇತರ ಅಧಿಕಾರಿಗಳಿಗೆ ರಿಸಿನ್‌ನಿಂದ ಕೂಡಿದ ಪತ್ರಗಳನ್ನು ಕಳುಹಿಸಿದ್ದ. ಈ ಪ್ರಕರಣದಲ್ಲಿ ಆತನಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.