ವಾಷಿಂಗ್ಟನ್ : ಜಾಗತಿಕವಾಗಿ ಅಮೆರಿಕದ ನಾಯಕತ್ವ ಪುನರ್ ಸ್ಥಾಪಿಸಲು ದೇಶೀಯ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಹೇಳಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಆಗಿರುವ ಜೋ ಬೈಡನ್ ಅವರು ಮಂಗಳವಾರ ವಿಲ್ಮಿಂಗ್ಟನ್‌ನಲ್ಲಿ ತಮ್ಮ ರಾಷ್ಟ್ರೀಯ ಭದ್ರತಾ ತಂಡವನ್ನು ಘೋಷಿಸಿದರು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಮಲಾ ಹ್ಯಾರಿಸ್, ‘ನಾವು ಚುನಾಯಿತ ನಾಯಕರಾಗಿ ಶ್ವೇತಭವನಕ್ಕೆ ಕಾಲಿಟ್ಟಾಗ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ನಮಗೆ ಮೊದಲೇ ತಿಳಿದಿತ್ತು’ ಎಂದರು.
ಶ್ವೇತಭವನಕ್ಕೆ ಕಾಲಿಟ್ಟ ನಂತರ ಅವರು ಅಭೂತಪೂರ್ವ ಸವಾಲುಗಳನ್ನು ಪಡೆದುಕೊಳ್ಳುತ್ತಾರೆ ಎಂದು ಒಪ್ಪಿಕೊಂಡ ಯುನೈಟೆಡ್ ಸ್ಟೇಟ್ಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ದೇಶೀಯ ಸವಾಲುಗಳನ್ನು ಜಯಿಸುವುದು ವಿಶ್ವದಾದ್ಯಂತ ಅಮೆರಿಕಾದ ನಾಯಕತ್ವವನ್ನು ಪುನಃಸ್ಥಾಪಿಸಲು ಮತ್ತು ಮುನ್ನಡೆಸಲು ಅಗತ್ಯ ಅಡಿಪಾಯವಾಗಿದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ನಮ್ಮ ಮುಂದಿರುವ ಪ್ರಥಮ ಸವಾಲು. ಇದರೊಂದಿಗೆ ದೇಶದ ಆರ್ಥಿಕತೆಯನ್ನು ಜವಾಬ್ದಾರಿಯುತವಾಗಿ ತೆರೆಯಬೇಕಾಗಿದೆ. ದೇಶೀಯ ಸವಾಲುಗಳ ನಿರ್ವಹಣೆ ಅಮೆರಿಕದ ನಾಯಕತ್ವ ಮರುಸ್ಥಾಪನೆಗೆ ಅಡಿಪಾಯವಾಗಿದೆ’ ಎಂದು ಕಮಲಾ ಹ್ಯಾರಿಸ್ ಹೇಳಿದರು. ನಾವು ಈ ಕೆಲಸ ಮಾಡಲು ಸಿದ್ಧರಿದ್ಧೇವೆ. ಅಮೆರಿಕದ ಮೈತ್ರಿಗಳನ್ನು ಒಗ್ಗೂಡಿಸುವ ಮತ್ತು ನವೀಕರಿಸುವ ಅಗತ್ಯವಿದೆ.