ವಾಷಿಂಗ್ಟನ್ (ಅಮೆರಿಕ): ಚೀನಾ, ಭಾರತ, ಮ್ಯಾನ್ಮಾರ್ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಎದುರಿಸಲು ವಿಶೇಷ ರಾಯಭಾರಿ ನೇಮಿಸುವಂತೆ ಒತ್ತಾಯಿಸಿ ಅಮೆರಿಕದ 25 ಕ್ಕೂ ಹೆಚ್ಚು ಸಂಸದರು ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಇಸ್ಲಾಂ ಫೋಬಿಯಾವನ್ನು ಜಾಗತಿಕ ಸಮಸ್ಯೆ ಎಂದು ಉಲ್ಲೇಖಿಸಿರುವ ಸಂಸದರು, ಇಸ್ಲಾಂ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಲು ಅಮೆರಿಕ ಮುಂದಾಗಬೇಕು. ಸರಿಯಾದ ಕಾರ್ಯತಂತ್ರ ರೂಪಿಸಬೇಕೆಂದು ಸಲಹೆ ನೀಡಿದೆ. ಮುಂದಿನ ವರ್ಷದ ವಾರ್ಷಿಕ ಮಾನವ ಹಕ್ಕುಗಳ ವರದಿಗಳಲ್ಲಿ ರಾಜ್ಯ ಪ್ರಾಯೋಜಿತ ಇಸ್ಲಾಂ ಫೋಬಿಕ್ ಹಿಂಸೆ ಮತ್ತು ಅಂತಹ ಕೃತ್ಯಗಳಿಗೆ ನಿರ್ಭಯವನ್ನು ಸೇರಿಸಬೇಕೆಂದು ಸಲಹೆ ನೀಡಿದ್ದಾರೆ.
ಈ ಪತ್ರ ಬರೆದಿದ್ದೇಕೆ?
ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್), ಇತ್ತೀಚೆಗೆ ಮುಸ್ಲಿಂ ವಿರೋಧಿ ದ್ವೇಷ ಹೆಚ್ಚುತ್ತಿದೆ ಎಂದು ವರದಿ ನೀಡಿದ ನಂತರ ಸಂಸದರು ಈ ಪತ್ರ ಬರೆದಿದ್ದಾರೆ. ಮುಸ್ಲಿಮರ ಮೇಲಿನ ಹಲ್ಲೆಗಳ ಸಂಬಂಧ 2021 ರ ಆರಂಭದಲ್ಲೇ 500 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮೇ ಮತ್ತು ಜೂನ್ ತಿಂಗಳಲ್ಲಿ ಮಸೀದಿ ವಿರೋಧಿ ಘಟನೆಗಳಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ಬೂರ್ಖಾ ಧರಿಸಿದ್ದ ಮಹಿಳೆಯರ ಮೇಲೆ ದೈಹಿಕ ಹಲ್ಲೆಗಳು ನಡೆದಿರೋದು ದುರಂತ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗೆಗಿನ ನಮ್ಮ ಬದ್ಧತೆಯ ಭಾಗವಾಗಿ ಇಸ್ಲಾಮೋಫೋಬಿಯಾವನ್ನು ಜಗತ್ತಿನ ಎಲ್ಲ ಮೂಲೆಯಲ್ಲೂ ಪುನರಾವರ್ತಿಸುವ ಮಾದರಿ ಎಂದು ನಾವು ಗುರುತಿಸಬೇಕು ಎಂದು ಬರೆದಿದ್ದಾರೆ. ಅಮೆರಿಕ, ಪ್ರತಿಯೊಬ್ಬರ ಧಾರ್ಮಿಕತೆ ಹಾಗೂ ಸ್ವಾತಂತ್ರ್ಯದ ಪರವಾಗಿ ದನಿಯೆತ್ತಬೇಕಿದೆ ಎಂದು ಹೇಳಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ
ಚೀನಾದಲ್ಲಿ ಉಯಿಘರ್ ಮತ್ತು ಬರ್ಮಾದ ರೋಹಿಂಗ್ಯಾಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಭಾರತ ಮತ್ತು ಶ್ರೀಲಂಕಾದಲ್ಲಿ ಮುಸ್ಲಿಮರಿಗೆ ವಿಧಿಸಿರುವ ನಿರ್ಬಂಧಗಳು, ರಾಜಕೀಯ ನಾಯಕರು ನೀಡುವ ಹೇಳಿಕೆಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ. ಇದು ನಿಜವಾದ ಜಾಗತಿಕ ಸಮಸ್ಯೆಯಾಗಿದ್ದು, ಅಮೆರಿಕ ಈ ಪಿಡುಗನ್ನು ನಿವಾರಿಸಬೇಕಿದೆ ಎಂದು ಬ್ಲಿಂಕ್ಗೆ ಸಂಸದರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ವುಮನ್ ಇಲಾಹಿ ಒಮರ್, ಪ್ರಪಂಚದಾದ್ಯಂತ ಮುಸ್ಲಿಂ ವಿರೋಧಿ ದ್ವೇಷವು ಹೆಚ್ಚುತ್ತಿದೆ. ಈ ವರ್ಷ ಅಮೆರಿಕದಲ್ಲಿ 500ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಳೆದ ತಿಂಗಳಲ್ಲಿ ಕೆನಡಾದಲ್ಲಿ ಮುಸ್ಲಿಂ ಸಮುದಾಯದ ಕುಟುಂಬವೊಂದನ್ನು ಹತ್ಯೆ ಮಾಡಲಾಗಿದೆ. ಚೀನಾ, ಭಾರತ, ಮ್ಯಾನ್ಮಾರ್ಗಳಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಿವೆ. ಇದರ ವಿರುದ್ಧ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು ಎಂದರು.
ಇದನ್ನೂ ಓದಿ:ಪೆಗಾಸಸ್ ಸ್ಪೈವೇರ್: ಹ್ಯಾಕಿಂಗ್ ವೈರಸ್‌ನಿಂದ ಜಾಗತಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ