ವಿಶ್ವಸಂಸ್ಥೆ:ಭಾರತದ ಪ್ರಧಾನಿ ನರೇಂದ್ರ ಮೋದಿ,ಅಮೆರಿಕ ಅಧ್ಯಕ್ಷ ಜೋ ಬೈಡನ್, ಜೋರ್ಡಾನ್ನ ಎರಡನೇ ಕಿಂಗ್ ಅಬ್ದುಲ್ಲಾ ಮತ್ತು ಬ್ರೆಜಿಲ್ ಹಾಗೂ ವೆನಿಜುವೆಲಾದ ಅಧ್ಯಕ್ಷರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಾಮಾನ್ಯ ಸಭೆಯಲ್ಲಿ ಸುಮಾರು 193 ಸದಸ್ಯ ರಾಷ್ಟ್ರಗಳಿದ್ದು, ಜಪಾನ್, ಭಾರತ ಮತ್ತು ಬ್ರಿಟನ್ನ ಪ್ರಧಾನಿಗಳು ಹಾಗೂ ಇಸ್ರೇಲ್‌ನ ಹೊಸ ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಸೇರಿದಂತೆ ಸುಮಾರು 23 ಮುಖ್ಯಸ್ಥರು ಈ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಕೊರೊನಾ ಕಾರಣದಿಂದಾಗಿ ಹಿಂದಿನ ವರ್ಷ ವರ್ಚುಯಲ್ ಆಗಿ ಸಭೆ ಆಯೋಜಿಸಲಾಗಿತ್ತು. ಈ ಬಾರಿಯೂ ಸಾಮಾನ್ಯ ಸಭೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ನಡೆಸಲು ತೀರ್ಮಾನಿಸಲಾಗಿತ್ತು. ಆದ್ದರಿಂದಾಗಿ ಹಿಂದಿನ ಬಾರಿಯಂತೆ, ಈ ಬಾರಿಯೂ ಕೆಲವು ರಾಷ್ಟ್ರಗಳಿಗೆ ಪೂರ್ವ ನಿಯೋಜಿತ ಭಾಷಣಗಳನ್ನು ಮಾಡಲು ಅವಕಾಶ ನೀಡಲಾಗಿದೆ.
ಮೊದಲೇ ರೆಕಾರ್ಡ್ ಮಾಡಲಾದ ಭಾಷಣಗಳನ್ನೇ ಪೂರ್ವ ನಿಯೋಜಿತ ಭಾಷಣಗಳು ಎನ್ನಲಾಗುತ್ತದೆ. ಈ ಬಾರಿ ಇರಾನ್, ಈಜಿಪ್ಟ್, ಫ್ರಾನ್ಸ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯ ಮುಖ್ಯಸ್ಥರು ಪೂರ್ವ ನಿಯೋಜಿತ ಹೇಳಿಕೆ ನೀಡಲಿದ್ದಾರೆ.