ಪೋರ್ಟ್-ಔ-ಪ್ರಿನ್ಸ್ (ಹೈಟಿ):ಇಲ್ಲಿನ ಜೈಲಿನಿಂದ 400ಕ್ಕೂ ಅಧಿಕ ಕೈದಿಗಳು ತಪ್ಪಿಸಿಕೊಂಡಿದ್ದು, ಜೈಲಾಧಿಕಾರಿ ಸೇರಿದಂತೆ 25 ಜನರು ಸಾವನ್ನಪ್ಪಿದ್ದಾರೆ ಎಂದು ಹೈಟಿ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಕ್ರೊಯಿಕ್ಸ್-ಡೇಸ್-ಬಾಕಿಟ್ಸ್ ಜೈಲಿನಲ್ಲಿ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಅತ್ಯಾಚಾರ, ಅಪಹರಣ ಮತ್ತು ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿ ಬಂಧಿತನಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್ ಲೀಡರ್ ಅರ್ನೆಲ್ ಜೋಸೆಫ್ನನ್ನು ಮುಕ್ತಗೊಳಿಸಲು ಈ ರೀತಿ ಮಾಡಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.
60 ಕೈದಿಗಳನ್ನು ಮತ್ತೆ ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೃತ್ಯ ನಡೆಸಲು ಯಾರು ಕೈದಿಗಳನ್ನು ಸಂಘಟಿಸಿದರು ಮತ್ತು ಏಕೆ ಎಂದು ತನಿಖೆ ನಡೆಸಲು ಅಧಿಕಾರಿಗಳು ಹಲವಾರು ಆಯೋಗಗಳನ್ನು ರಚಿಸಿದ್ದಾರೆ. ಮೃತ ಜೈಲು ನಿರ್ದೇಶಕನನ್ನು ಪಾಲ್ ಜೋಸೆಫ್ ಹೆಕ್ಟರ್ ಎಂದು ಗುರುತಿಸಲಾಗಿದೆ.
2014ರಲ್ಲಿಯೂ ಇದೇ ಜೈಲಿನಲ್ಲಿದ್ದ 899 ಕೈದಿಗಳ ಪೈಕಿ 300ಕ್ಕೂ ಹೆಚ್ಚು ಕೈದಿಗಳು ತಪ್ಪಿಸಿಕೊಂಡಿದ್ದರು. ಗುರುವಾರ ನಡೆದ ದುರ್ಘಟನೆಯ ಸಂದರ್ಭದಲ್ಲಿ ಜೈಲಿನಲ್ಲಿ 1,542 ಕೈದಿಗಳಿದ್ದರು ಎಂದು ತಿಳಿದುಬಂದಿದೆ.