ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಉದ್ಯಮಿಯಾಗಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ಸೇರಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಏರಿದ ಮೊದಲ ವರ್ಷದಲ್ಲಿ ವೈಟ್‌ಹೌಸ್‌ನಿಂದ ಕೇವಲ 750 ಡಾಲರ್ ಮಾತ್ರ ಆದಾಯ ತೆರಿಗೆ ಪಾವತಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು, ಟ್ರಂಪ್ ಕೋಟ್ಯಧಿಪತಿಯಾಗಿದ್ದಾರೆ. ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ಆದರೆ 15 ವರ್ಷಗಳಲ್ಲಿ ತೆರಿಗೆ ಪಾವತಿಸಿಲ್ಲ ಎಂದು ವರದಿ ಮಾಡಿದೆ.
ವೈಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಟ್ರಂಪ್, ಈ ವರದಿಯನ್ನು ತಳ್ಳಿಹಾಕಿದ್ದು, ಇದು ಸುಳ್ಳು ಸುದ್ದಿಯಾಗಿದೆ. ತಾನು ತೆರಿಗೆ ಪಾವತಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷರು ತೆರಿಗೆ ಪಾವತಿ ಮಾಡಿರುವ ಕುರಿತ 2 ದಶಕಗಳ ವರದಿ ಪಡೆಯಲಾಗಿದೆ ಎಂದು ಟೈಮ್ಸ್ ಹೇಳಿಕೊಂಡಿದೆ. ಮುಂದಿನ ಮಂಗಳವಾರ ಅಧ್ಯಕ್ಷೀಯ ಚುನಾವಣೆಯ ಮೊದಲ ಸಂವಾದ ನಡೆಯಲಿದೆ.
ಅಧ್ಯಕ್ಷರು ತೆರಿಗೆ ಪಾವತಿ ಮಾಡದಿರುವ ಮಾಹಿತಿ ಇದೀಗ ಬಹಿರಂಗವಾಗಿದೆ. ಪ್ರಚಾರದ ವೇಳೆ ಟ್ರಂಪ್ ತೆರಿಗೆ ಪಾವತಿ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 2016ರಲ್ಲೂ ತೆರಿಗೆ ಪಾವತಿ ಮಾಹಿತಿಯನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ ಅದನ್ನು ಟ್ರಂಪ್ ಪಾಲಿಸಿಲ್ಲ ಎಂದು ಟೈಮ್ಸ್ ವರದಿ ಮಾಡಿದೆ.
2016ರಲ್ಲಿ ಸಂವಾದದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್, ಟ್ರಂಪ್ ಆದಾಯ ತೆರಿಗೆ ಪಾವತಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಯಾಕೆಂದರೆ ಅವರು ತೆರಿಗೆಯನ್ನೇ ಪಾವತಿಸಿಲ್ಲ ಎಂದು ಆರೋಪಿಸಿದ್ದರು.
ಈ ವಿಚಾರ ಡೊನಾಲ್ಡ್ ಟ್ರಂಪ್ ವಿರೋಧಿ ಬಣ ಡೆಮಾಕ್ರಟಿಕ್ ಪಕ್ಷಕ್ಕೆ ಪ್ರಚಾರದ ವಸ್ತುವಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.