ನ್ಯೂಯಾರ್ಕ್: ತೆಹರಾನ್ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ ಬಗ್ಗೆ ಅಮೆರಿಕದ ಮಾಧ್ಯಮವೊಂದು ವಿಶ್ಲೇಷಿಸಿ ಎರಡನೇ ವಿಡಿಯೋ ಬಿಡುಗಡೆ ಮಾಡಿದೆ.
ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನವರಿ 8ರಂದು ಬೋಯಿಂಗ್ 737-800 ವಿಮಾನಕ್ಕೆ ಇರಾನ್ ಉಡಾಯಿಸಿದ್ದ ಎರಡು ಕ್ಷಿಪಣಿಗಳು ಅಪ್ಪಳಿಸಿದ್ದವು. ಈ ಕ್ಷಿಪಣಿಗಳನ್ನು ವಿಮಾನದಿಂದ 8 ಮೈಲಿ ದೂರದ ಇರಾನ್ ಮಿಲಿಟರಿ ಕ್ಯಾಂಪ್ನಿಂದ ಉಡಾವಣೆ ಮಾಡಲಾಗಿತ್ತು ಎಂಬುದು ಗೊತ್ತಾಗಿದೆ. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 176 ಜನ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು.
ವಿಮಾನದ ಟ್ರಾನ್ಸ್‌ಪಾಂಡರ್ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇಕೆ?
ನತದೃಷ್ಟ ವಿಮಾನಕ್ಕೆ ಮತ್ತೊಂದು ಕ್ಷಿಪಣಿ ಅಪ್ಪಳಿಸುವ ಕೆಲವೇ ಸೆಕೆಂಡುಗಳ ಮೊದಲು ವಿಮಾನದ ಟ್ರಾನ್ಸ್‌ಪಾಂಡರ್ ಕೆಲಸ ಮಾಡುವುದನ್ನು ಏಕೆ ನಿಲ್ಲಿಸಿದೆ ಎಂಬುದರ ಕುರಿತು ಹೊಸ ವಿಡಿಯೋ ಉತ್ತರ ನೀಡುತ್ತದೆ.
ಆ ಕ್ಷಿಪಣಿಯು ವಿಮಾನವನ್ನು ಅಪ್ಪಳಿಸುವ ಮೊದಲು ಟ್ರಾನ್ಸ್‌ಪಾಂಡರ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಆರಂಭಿಕ ಸ್ಟ್ರೈಕ್ ಟ್ರಾನ್ಸ್‌ಪಾಂಡರ್ ಅನ್ನು ನಿಷ್ಕ್ರೀಯಗೊಳಿಸಿದೆ ಎಂಬ ಮಹತ್ವದ ಅಂಶ ಹೊಸ ವಿಡಿಯೋದಲ್ಲಿ ಕಾಣಸಿಗುತ್ತದೆ. ಎರಡನೇ ಸ್ಟ್ರೈಕ್‌ಗೆ ಮೊದಲು 23 ಸೆಕೆಂಡ್ಗಳ ನಂತರದ ವಿಡಿಯೋದಲ್ಲಿ ಇದು ದೃಢಪಟ್ಟಿದೆ.
ಕ್ಷಿಪಣಿ ತಕ್ಷಣ ವಿಮಾನವನ್ನು ಉರುಳಿಸಲಿಲ್ಲ. ಹೊಸ ವಿಡಿಯೋದಲ್ಲಿ, ಟೆಹರಾನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ವಿಮಾನ ಕೆಲವು ನಿಮಿಷಗಳ ನಂತರ ಸ್ಫೋಟಗೊಂಡಿತು. ನಂತರ ನೆಲಕ್ಕೆ ಅಪ್ಪಳಿಸಿದೆ.
ಇರಾನಿನ ಮಿಲಿಟರಿ ಬೇಸ್‌ನಿಂದ ನಾಲ್ಕು ಮೈಲಿ ದೂರದಲ್ಲಿರುವ ಬಿಡ್ಕನೆಹ್ ಗ್ರಾಮದ ಬಳಿಯ ಕಟ್ಟಡದ ಮೇಲ್ಛಾವಣಿಯ ಮೇಲಿರಿಸಿದ್ದ ಕ್ಯಾಮೆರಾದಲ್ಲಿ ಹೊಸ ವಿಡಿಯೋ ಸೆರೆಯಾಗಿದೆ ಎಂದು ಮಾಧ್ಯಮ ದೃಢಪಡಿಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ವಾಯುಪ್ರದೇಶ ಘಟಕದ ಕಮಾಂಡರ್ ಅಮೀರ್ ಅಲಿ ಹಾಜಿಜಾಡೆಹ್, 'ಅಲ್ಲಿನ ನೆಲೆಯೊಂದರಿಂದ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ' ಎಂದು ಹೇಳಿದ್ದಾರೆ.