ಗ್ರೀನ್ವಿಲ್ಲೆ (ಯುಎಸ್): ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಭೀಕರ ಕಾಳ್ಗಿಚ್ಚಿನಿಂದ ಸುಮಾರು 900ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ. ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಮತ್ತು ವಿನಾಶಕಾರಿ ಕಾಳ್ಗಿಚ್ಚು ಇದಾಗಿದ್ದು, ರಕ್ಷಣಾ ಕಾರ್ಯಕರ್ತರು ಹಾಗೂ ಸುಮಾರು 6,000 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಡಿದಾದ ಪ್ರಪಾತಗಳು, ಗಾಢವಾದ ಹೊಗೆಯಿಂದಾಗಿ ಕಾರ್ಯಾಚರಣೆಗೆ ಸ್ಪಲ್ಪ ತೊಡಕಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಅಲ್ಜೀರಿಯಾದಲ್ಲಿ ಭಾರಿ ಕಾಡ್ಗಿಚ್ಚು; 25 ಸೈನಿಕರು ಸೇರಿ 40ಕ್ಕೂ ಅಧಿಕ ಮಂದಿ ಸಜೀವ ದಹನ!
ಮಂಗಳವಾರದ ವೇಳೆಗೆ ಸುಮಾರು 900 ಮನೆಗಳು ನಾಶವಾಗಿವೆ. ಗ್ರೀನ್ವಿಲ್ಲೆಯಲ್ಲಿ ಹೆಚ್ಚಿನ ಭಾಗ ಬೆಂಕಿಗಾಹುತಿಯಾಗಿದೆ. ಜುಲೈ 14 ರಂದು ಕಾಣಿಸಿಕೊಂಡಿರುವ ಕಾಳ್ಗಿಚ್ಚು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಸುಮಾರು 762 ಚದರ ಮೈಲಿಗಳಷ್ಟು (1,973 ಚದರ ಕಿಲೋಮೀಟರ್‌ಗಳಷ್ಟು) ಬೆಂಕಿ ವ್ಯಾಪಿಸಿದೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹವಾಮಾನ ಬದಲಾವಣೆಯಿಂದ ಸಂಭವಿಸುವ ಕಾಳ್ಗಿಚ್ಚು ಇದಾಗಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ಉಷ್ಣತೆಯ ವಾತಾವರಣವಿದೆ. ಮುಂದಿನ ದಿನಗಳಲ್ಲೂ ಇಂತಹ ವಿಪತ್ತು ಎದುರಾಗಬಹುದು. "ಈ ಬೆಂಕಿ ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಎಲ್ಲಿ ನಿಯಂತ್ರಣಕ್ಕೆ ಬರುತ್ತದೆ ಎಂದು ನಮಗೆ ತಿಳಿದಿಲ್ಲ. ನಮಗೆ ಸವಾಲು ಹಾಕುತ್ತಲೇ ಇದೆ "ಎಂದು ಪ್ಲುಮಾಸ್ ರಾಷ್ಟ್ರೀಯ ಅರಣ್ಯ ಮೇಲ್ವಿಚಾರಕ ಕ್ರಿಸ್ ಕಾರ್ಲ್ಟನ್ ಹೇಳಿದ್ದಾರೆ.