ಕೇಪ್ ಕ್ಯಾನವೆರಲ್ (ಫ್ಲೋರಿಡಾ) :ಎಂಟು ಕ್ಷುದ್ರ ಗ್ರಹಗಳನ್ನು ಅನ್ವೇಷಿಸಲು ಲೂಸಿ ಹೆಸರಿನ ನಾಸಾ ಬಾಹ್ಯಾಕಾಶ ನೌಕೆ ಶನಿವಾರ ಆಕಾಶಕ್ಕೆ ಹಾರಿತು. ಸೌರ ಮಂಡಲದ ಅನ್ವೇಷಣೆ ಹಾಗೂ ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಶನಿವಾರ ಲೂಸಿ ಎಂಬ ನೌಕೆಯನ್ನು ಕಳುಹಿಸಿದೆ.
ಲೂಸಿಯು ಸೌರಶಕ್ತಿ ಚಾಲಿತ ಬಾಹ್ಯಾಕಾಶ ನೌಕೆಯಾಗಿದೆ. ಏಳು ನಿಗೂಢ ಬಾಹ್ಯಾಕಾಶ ಶಿಲೆಗಳು ಗುರುಗ್ರಹದ ಕಕ್ಷೆಯನ್ನು ಹಂಚಿಕೊಳ್ಳುವ ಕ್ಷುದ್ರಗ್ರಹಗಳ ಸಮೂಹಗಳಲ್ಲಿವೆ. 8 ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲಿರುವ ಲೂಸಿ, ಹಿಂದಿನ ಅಧ್ಯಯನಗಳಿಗಿಂತಲೂ ಹೆಚ್ಚು ಕ್ಷುದ್ರಗ್ರಹಗಳನ್ನು ಅಭ್ಯಸಿಸುವ ಸಾಮರ್ಥ್ಯ ಹೊಂದಿದೆ.
ಲೂಸಿ ನೌಕೆಯನ್ನು ಹೊತ್ತ ಅಟ್ಲಾಸ್ 5 ರಾಕೆಟ್ ಫ್ಲಾರಿಡಾದ ಕೇಪ್ ಕ್ಯಾನವೆರಲ್ ಉಡಾವಣಾ ನೆಲೆಯಿಂದ ಶನಿವಾರ ಮುಂಜಾನೆ ಸ್ಥಳೀಯ ಕಾಲ 5.34ಕ್ಕೆ (0934 ಜಿಎಂಟಿ) ಬಾಹ್ಯಾಕಾಶಕ್ಕೆ ಹಾರಿತು. ಲೂಸಿಯನ್ನು ಸುಮಾರು 4 ಬಿಲಿಯನ್ ಮೈಲುಗಳ (6.3 ಬಿಲಿಯನ್ ಕಿಲೋಮೀಟರ್) ವ್ಯಾಪ್ತಿಯಲ್ಲಿ ಸುತ್ತುವ ಕಕ್ಷೆಯ ಪ್ರಯಾಣಕ್ಕೆ ಕಳುಹಿಸಿತು.