ವಾಷಿಂಗ್ಟನ್/ನವದೆಹಲಿ:ಚಂದ್ರಯಾನ-2 ಯೋಜನೆಯ ಕೊನೆ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ವಿಕ್ರಮನ ಹುಡುಕಾಟಕ್ಕೆ ನಾಸಾ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆದರೂ ಲ್ಯಾಂಡರ್ ಪತ್ತೆಯಾಗಿರಲಿಲ್ಲ.
ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲುನಾರ್ ರಿಕನಸೈನ್ಸ್ ಆರ್ಬಿಟರ್(LRO) ಸದ್ಯ ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳು ಸೇರಿದಂತೆ ಕೋಟ್ಯಂತರ ಭಾರತೀಯರ ಅನುಮಾನಗಳಿಗೆ ಉತ್ತರ ದೊರೆತಿದೆ.
ಸಂಪರ್ಕಕ್ಕೆ ಬರಲೇ ಇಲ್ಲ ಲ್ಯಾಂಡರ್... 'ವಿಕ್ರಮ'ನೊಂದಿಗೆ ಶಾಶ್ವತ ನಿದ್ರೆಗೆ ಜಾರಿದ 'ಪ್ರಜ್ಞಾನ್'
ತಮ್ಮ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿರುವುದನ್ನು ನಾಸಾ ಫೋಟೋ ಸಹಿತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಲ್ಯಾಂಡರ್ ಸುರಕ್ಷಿತವಾಗಿ ಇಳಿದಿಲ್ಲ ಎನ್ನುವುದೂ ಫೋಟೋದಲ್ಲಿ ಸ್ಪಷ್ಟವಾಗಿದೆ.
ಫೋಟೋದಲ್ಲಿ ಕಾಣಿಸುವ ಹಸಿರು ಚುಕ್ಕೆಗಳು ಲ್ಯಾಂಡರ್ ಅವಶೇಷಗಳು ಎನ್ನಲಾಗಿದ್ದು, ನೀಲಿ ಚುಕ್ಕೆಗಳು ಲ್ಯಾಂಡಿಂಗ್ ವೇಳೆ ಚದುರಿದ ಮಣ್ಣು ಎಂದು ನಾಸಾ ಹೇಳಿದೆ.
ಚಂದ್ರಯಾನ 2 ಯೋಜನೆ ಬಗ್ಗೆ ಒಂದಿಷ್ಟು:
ಜುಲೈ 22ರ ಮಧ್ಯಾಹ್ನ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ-2 ರಾಕೆಟ್ ಸೆಪ್ಟೆಂಬರ್ 2ರಂದು ಚಂದ್ರನ ಕಕ್ಷೆ ಸೇರಿತ್ತು.
ಯೋಜನೆಯಂತೆ ಸೆಪ್ಟೆಂಬರ್ 7ರ ನಸುಕಿನ ಜಾವ ರೋವರ್ ಒಳಗೊಂಡ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಬೇಕಿತ್ತು.
ಆದರೆ ಲ್ಯಾಂಡಿಂಗ್ಗೂ ಕೆಲ ಕ್ಷಣಗಳ ಮುನ್ನ ಲ್ಯಾಂಡರ್ ಸಂಪರ್ಕ ಕಡಿತವಾಗಿತ್ತು. ಯೋಜನೆಯ ಕೊನೆಯ ಹಾಗೂ ಮಹತ್ವದ ಹಂತದಲ್ಲಿ ನಡೆದ ಈ ಬೆಳವಣಿಗೆ ಇಸ್ರೋ ವಿಜ್ಞಾನಿ ಬಳಗಕ್ಕೆ ದೊಡ್ಡ ನಿರಾಸೆ ಮೂಡಿಸಿತ್ತು. ಇಷ್ಟಾದರೂ ಛಲ ಬಿಡದ ವಿಜ್ಞಾನಿಗಳು ಸಂಪರ್ಕ ಮರುಸ್ಥಾಪಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಎರಡು ವಾರದ ನಿರಂತರ ಪ್ರಯತ್ನ ಕೈಗೂಡಲಿಲ್ಲ.