ನ್ಯೂಯಾರ್ಕ್ :2068ರ ವೇಳೆಗೆ ಅಪೋಫಿಸ್ ಎಂಬ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳನ್ನು ನಾಸಾ ತಳ್ಳಿ ಹಾಕಿದೆ. ಈ ಬೃಹತ್ ಬಾಹ್ಯಾಕಾಶ ಬಂಡೆಯಿಂದ ನಮ್ಮ ಗ್ರಹವು ಕನಿಷ್ಠ ಒಂದು ಶತಮಾನದವರೆಗೆ ಸುರಕ್ಷಿತ ಎಂದು ಹೇಳಿದೆ.
ಕನಿಷ್ಠ ಪಕ್ಷ ಮುಂದಿನ ಒಂದು ಶತಮಾನದವರೆಗೆ ಅಫೋಪಿಸ್ನಿಂದ ಭೂಮಿಗೆ ಯಾವುದೇ ಅಪಾಯವಾಗಲಾರದು ಎಂಬುದನ್ನು ಹೊಸ ರಡಾರ್ ವೀಕ್ಷಣೆ ಅಭಿಯಾನ ಮತ್ತು ಕಕ್ಷೆಯ ವಿಶ್ಲೇಷಣೆಯಿಂದ ಕಂಡುಕೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.
2004ರಲ್ಲಿ ಪ್ರಥಮ ಬಾರಿಗೆ ಕಂಡು ಹಿಡಿಯಲಾದ ಅಫೋಪಿಸ್ ಕ್ಷುದ್ರಗ್ರಹವು ಸುಮಾರು 340 ಮೀಟರ್ ಉದ್ದವಾಗಿದೆ ಎಂದು ತಿಳಿದಿದ್ದು, 2029ರ ಹೊತ್ತಿಗೆ ಭೂಮಿಗೆ ಅಪಾಯವನ್ನುಂಟು ಮಾಡಬಹುದು ಎಂದು ಖಗೋಳ ಶಾಸ್ತ್ರಜ್ಞರು ಅನುಮಾನ ವ್ಯಕ್ತಪಡಿಸಿದ್ದರು.
ಆದರೆ, ಹೊಸ ಸಂಶೋಧನೆಗಳ ಪ್ರಕಾರ 2029ಕ್ಕೆ ಈ ಕ್ಷುದ್ರ ಬಂಡೆಯಿಂದ ಭೂಮಿಗೆ ಯಾವುದೇ ಅಪಾಯವಾಗಲಾರದು ಹಾಗೂ ಬಹುಶಃ 2036ರ ಹೊತ್ತಿಗೆ ಇದು ಮತ್ತೊಮ್ಮೆ ಭೂಮಿಗೆ ಅತಿ ಸನಿಹ ಬರಬಹುದು ಎಂದು ಹೇಳಲಾಗಿತ್ತು.
"2068ರ ವೇಳೆಗೆ ಅಫೋಫಿಸ್ ಯಾವುದೇ ಪ್ರಭಾವ ಬೀರಲಾರದು ಹಾಗೂ ನಮ್ಮ ಲೆಕ್ಕಾಚಾರಗಳ ಪ್ರಕಾರ ಕನಿಷ್ಠ ಮುಂದಿನ 100 ವರ್ಷಗಳವರೆಗೆ ಯಾವುದೇ ಅಪಾಯವನ್ನು ತೋರಿಸುವುದಿಲ್ಲ" ಎಂದು ನಾಸಾದ ಸೆಂಟರ್ ಫಾರ್ ನಿಯರ್-ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (ಸಿಎನ್‌ಇಒಎಸ್) ನ ಡೇವಿಡ್ ಫರ್ನೊಚಿಯಾ ಹೇಳಿದ್ದಾರೆ.