ವಾಷಿಂಗ್ಟನ್: ಇರಾಕ್‌ನಲ್ಲಿನ ಅಮೆರಿಕ ಪಡೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದಕ್ಕೆ ಪ್ರತಿಯಾಗಿ ಅಮೆರಿಕ, 'ಇರಾನ್ ವಿರುದ್ಧ ಹೆಚ್ಚುವರಿ ಶಿಕ್ಷೆಯಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ಇರಾನಿನ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ನಾವು ಆಯ್ಕೆಗಳ ಮೌಲ್ಯಮಾಪನ ಮುಂದುವರಿಸಿದ್ದೇವೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇರಾನಿನ ಆಡಳಿತದ ಮೇಲೆಅಮೆರಿಕ ಹೆಚ್ಚುವರಿ ಶಿಕ್ಷೆಯಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸುತ್ತಿದೆ. ಇರಾನ್ ತನ್ನ ನಡವಳಿಕೆ ಬದಲಾಯಿಸುವವರೆಗೆ ಈ ಪ್ರಬಲ ನಿರ್ಬಂಧಗಳು ಮುಂದುವರಿಯಲಿವೆ' ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ,ಪಡೆ ಡ್ರೋಣ್ ದಾಳಿಯ ಮೂಲಕ ಇರಾನ್ ಮಿಲಿಟರಿಯ ಉನ್ನತ ಅಧಿಕಾರಿ ಜನರಲ್ ಸೊಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್, ಇರಾಕ್ನಲ್ಲಿರುವ ಅಮೆರಿಕ ಸೈನಿಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಬುಧವಾರ ಹನ್ನೆರಡು ಕ್ಷಿಪಣಿ ದಾಳಿ ನಡೆಸಿತ್ತು.