ವಾಷಿಂಗ್ಟನ್, ಅಮೆರಿಕ:ಕಡಿಮೆ ವಾಯುಮಾಲಿನ್ಯ ಹೊರಸೂಸುವ ತಂತ್ರಜ್ಞಾನ ಮತ್ತು ಕಡಿಮೆ ವೆಚ್ಚದ ಸೌರ ತಂತ್ರಜ್ಞಾನ ಸೇರಿದಂತೆ ಹಲವು ಯೋಜನೆಗಳಿಗೆ ಭಾರತದ ಪ್ರಧಾನಿಗಳು ಒಪ್ಪಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಮಾತನಾಡಿದ ಸ್ಕಾಟ್ ಮಾರಿಸನ್ ಎರಡು ರಾಷ್ಟ್ರಗಳು ಕೆಲವು ಯೋಜನೆಗಳಿಗೆ ಒಪ್ಪಿಕೊಂಡಿದ್ದು, ಇದು ಉಭಯರಾಷ್ಟ್ರಗಳೊಂದಿಗಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಒಂದು ವಾರದ ಹಿಂದಷ್ಟೇ ಪ್ರಧಾನಿ ಮೋದಿ ಅವರೊಂದಿಗೆ ಸ್ಕಾಟ್ ಮಾರಿಸನ್ ದೂರವಾಣಿ ಮೂಲಕ ಮಾತನಾಡಿ, ವಿವಿಧ ಯೋಜನೆಗಳಲ್ಲಿ ಭಾರತ-ಆಸ್ಟ್ರೇಲಿಯಾ ಪಾಲುದಾರಿಕೆಯ ಕುರಿತಂತೆ ಚರ್ಚೆ ನಡೆಸಿದ್ದರು. ಈಗ ಕ್ವಾಡ್ ನೇತೃತ್ವದ ಸಭೆಯ ಅಂಗವಾಗಿ ಅಮೆರಿಕಕ್ಕೆ ಎರಡೂ ರಾಷ್ಟ್ರಗಳ ಮುಖ್ಯಸ್ಥರು ಬಂದಿದ್ದು, ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.
ಎರಡೂ ದೇಶಗಳ ನಡುವೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಹೈಡ್ರೋಜನ್ ಶಕ್ತಿಯ ಅಭಿವೃದ್ಧಿ, ಅತಿ ಕಡಿಮೆ ವೆಚ್ಚದ ಸೌರ ಕಾರ್ಯಕ್ರಮಗಳು ಮತ್ತು ವಾಯುಮಾಲಿನ್ಯ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಎರಡೂ ರಾಷ್ಟ್ರಗಳು ಪಾಲುದಾರಿಕೆ ಹೊಂದಲಿವೆ ಎಂದು ಸ್ಕಾಟ್ ಮಾರಿಸನ್ ಹೇಳಿದ್ದಾರೆ.
ಜಗತ್ತಿನಲ್ಲಿ ಹವಾಮಾನ ವೈಪರಿತ್ಯ ಸಂಭವಿಸುತ್ತಿದ್ದು, ಬೇರೆ ರಾಷ್ಟ್ರಗಳಿಗೂ ಕೂಡಾ ನೆರವು ನೀಡಬೇಕಾಗಿದೆ. ನಾವು ಅತ್ಯಂತ ಕಡಿಮೆ ವಾಯುಮಾಲಿನ್ಯ ಉಂಟುಮಾಡುವ ಹೈಡ್ರೋಜನ್ ಸೆಲ್ ಟೆಕ್ನಾಲಜಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ಮಾರಿಸನ್ ಭರವಸೆ ನೀಡಿದ್ದಾರೆ.
ಸೌರಶಕ್ತಿ ಕಾರ್ಯಕ್ರಮಗಳ ವಿಚಾರವಾಗಿ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಇದರಿಂದ ಸುಮಾರು 80 ಮಿಲಿಯನ್ಗೂ ಹೆಚ್ಚು ಮನೆಗಳಿಗೆ ಶುದ್ಧ ಅಡುಗೆ ಇಂಧನ ಒದಗಿಸಹುದಾಗಿದೆ ಎಂದು ಮಾರಿಸನ್ ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೂ ಮೊದಲು ಜಪಾನ್ ಪ್ರಧಾನಿಯೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ದರು. ಈ ವೇಳೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ಸಮುದ್ರಯಾನಕ್ಕೆ ಇರುವ ಅವಕಾಶವನ್ನು ಎರಡೂ ರಾಷ್ಟ್ರಗಳು ರಕ್ಷಿಸಿಕೊಳ್ಳಬೇಕು ಎಂದು ಎರಡೂ ರಾಷ್ಟ್ರಗಳು ಪ್ರತಿಪಾದಿಸಿದವು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಯಾವುದೇ ದೇಶವು ಏಕಸ್ವಾಮ್ಯ ಸಾಧಿಸುವುದನ್ನು ಮತ್ತು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ವಿರೋಧಿಸಬೇಕು. ಈ ನಿಟ್ಟಿನಲ್ಲಿ ಪರಸ್ಪರ ರಕ್ಷಣಾ ಸಹಕಾರ ಮತ್ತು ರಕ್ಷಣಾ ತಂತ್ರಜ್ಞಾನ ಹಂಚಿಕೊಳ್ಳಬೇಕೆಂದು ಎರಡೂ ರಾಷ್ಟ್ರಗಳು ಪ್ರತಿಪಾದಿಸಿದವು.
ಇದನ್ನೂ ಓದಿ:ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗಿನ ಕ್ವಾಡ್ ಸಭೆಗೆ ಪ್ರಧಾನಿ ಗೈರು ಸಾಧ್ಯತೆ