ವಾಷಿಂಗ್ಟನ್(ಅಮೆರಿಕ): ಅಮೆರಿಕದ ಐದು ಟಾಪ್ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಒನ್-ಒ-ಒನ್ (One-O-One ) ಸಭೆ ನಡೆಸಲಿದ್ದಾರೆ. ಐವರಲ್ಲಿ ಇಬ್ಬರು ಭಾರತೀಯ - ಅಮೆರಿಕನ್ನರಾಗಿದ್ದಾರೆ. ಅಡೋಬ್ ಕಂಪನಿಯಿಂದ ಶಾಂತನು ನಾರಾಯಣ್ ಮತ್ತು ಜನರಲ್ ಅಟೋಮಿಕ್ಸ್ ಕಂಪನಿಯ ವಿವೇಕ್ ಲಾಲ್ ಭಾರತೀಯ ಮೂಲದವರಾಗಿದ್ದಾರೆ.
ಕ್ವಾಲ್ಕಾಮ್ ಕಂಪನಿಯಿಂದ ಕ್ರಿಸ್ಟಿಯಾನೋ ಇ ಅಮೋನ್, ಫಸ್ಟ್ ಸೋಲಾರ್ನಿಂದ ಮಾರ್ಕ್ ವಿಡ್ಮಾರ್ ಮತ್ತು ಬ್ಲ್ಯಾಕ್ ಸ್ಟೋನ್ ಕಂಪನಿಯಿಂದ ಸ್ಟೀಫನ್ ಎ ಶ್ವಾರ್ಜ್‌ಮನ್ ಸಹ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಭಾರತದ ಆದ್ಯತೆಗಳ ಪ್ರತಿಬಿಂಬ
ಭಾರತದಲ್ಲಿ ಹೂಡಿಕೆಗಳಿಗಿರುವ ಅವಕಾಶಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಮೆರಿಕದ ಪ್ರಮುಖ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಅಮೆರಿಕದ ವಿವಿಧ ಪ್ರದೇಶಗಳ ಐವರು ಸಿಇಒಗಳೊಂದಿಗಿನ ಭೇಟಿ ಸರ್ಕಾರದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ.
ಐಟಿ, ಡಿಜಿಟಲ್ಗೆ ಸಂಬಂಧಿಸಿದಂತೆ ನಾರಾಯಣ್ ಜತೆ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ. ವಿವೇಕ್ ಲಾಲ್ ಜತೆಗಿನ ಮೋದಿ ಸಭೆ ಮಹತ್ವದ್ದಾಗಿದೆ. ಲಾಲ್ ಕಂಪನಿ, ಜನರಲ್ ಅಟೊಮಿಕ್ಸ್ ಮಿಲಿಟರಿ ಡ್ರೋನ್ ತಂತ್ರಜ್ಞಾನಗಳಲ್ಲಿ ಪ್ರವರ್ತಕ ಮಾತ್ರವಲ್ಲದೆ, ವಿಶ್ವದ ಅತ್ಯಾಧುನಿಕ ಮಿಲಿಟರಿ ಡ್ರೋನ್ ತಯಾರಿ ಮಾಡಲಿದೆ. ಭಾರತವು ಸಶಸ್ತ್ರ ಪಡೆಗಳ ಮೂರು ಶಾಖೆಗಳಿಗೆ ಹೆಚ್ಚಿನ ಡ್ರೋನ್ಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ.
ವಿವೇಕ್ ಲಾಲ್ ಜತೆಗೆ ಮಹತ್ವದ ಮಾತುಕತೆ
ಜಕಾರ್ತದಲ್ಲಿ ಜನಿಸಿದ ವಿವೇಕ್ ಲಾಲ್, ಈಗ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಇವರು ಸುಮಾರು 10 ವರ್ಷಗಳಿಂದ 18 ಶತಕೋಟಿ ಡಾಲರ್ ಮೌಲ್ಯದ ಪ್ರಮುಖ ದ್ವಿಪಕ್ಷೀಯ ರಕ್ಷಣಾ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಮತ್ತು ಅಮೆರಿಕ ಹೊಸ ಸಂಬಂಧಕ್ಕೆ ರಕ್ಷಣಾ ವ್ಯಾಪಾರವು ಪ್ರಮುಖ ಆಧಾರಸ್ತಂಭವಾಗಿದೆ.