ವಾಷಿಂಗ್ಟನ್:ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಮತ್ತೆ ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರಾಂತ್ಯಕ್ಕೆ ಮೋದಿ ಜೊತೆಗೆ ಇದೇ ವಿಚಾರವಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಅಮೆರಿಕ ದೇಶವು ಭಾರತ ಹಾಗೂ ಪಾಕಿಸ್ತಾನ ದೇಶದ ಪ್ರತಿಯೊಂದು ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಶ್ವೇತಭವನದ ಮೂಲಗಳು ಹೇಳಿವೆ.
ಕಾಶ್ಮೀರ ವಿಚಾರದಲ್ಲಿ ಸದ್ಯ ಉದ್ಭವಿಸಿರುವ ಆತಂಕ ಶಮನಕ್ಕೆ ಭಾರತದ ಯೋಜನೆಗಳೇನು ಎನ್ನುವ ವಿಚಾರವನ್ನು ಸ್ವತಃ ಪ್ರಧಾನಿ ಮೋದಿಯವರಿಂದ ಡೊನಾಲ್ಡ್ ಟ್ರಂಪ್ ಕೇಳಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಶ್ಮೀರ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿ ಶಾಂತಿ ಮರುಸ್ಥಾಪನೆಗೆ ಅಮೆರಿಕ ಸಕಲ ರೀತಿಯಲ್ಲೂ ಸಹಾಯ ಮಾಡಲು ಸಿದ್ಧ ಎನ್ನುವುದನ್ನು ಟ್ರಂಪ್ ಕೆಲ ದಿನಗಳ ಹಿಂದೆ ಹೇಳಿದ್ದರು. ಆದರೆ ಕಾಶ್ಮೀರ ವಿಚಾರ ಅತ್ಯಂತ ಸೂಕ್ಷ್ಮವಾದದ್ದು ಎನ್ನುವುದನ್ನೂ ಅವರು ಒಪ್ಪಿಕೊಂಡಿದ್ದಾರೆ.
ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆಗೆ ಸಿದ್ಧ ಎಂದು ಡೊನಾಲ್ಡ್ ಟ್ರಂಪ್ ಎರಡು ಬಾರಿ ಹೇಳಿದ್ದರೂ ಭಾರತ ಯಾವುದೇ ರೀತಿಯಲ್ಲೂ ಈ ಹೇಳಿಕೆಗೆ ಸ್ಪಂದಿಸಿಲ್ಲ. ವಾರಾಂತ್ಯ ಟ್ರಂಪ್-ಮೋದಿ ಭೇಟಿ ಈ ಎಲ್ಲ ಕಾರಣಗಳಿಂದ ವಿಶ್ವಮಟ್ಟದಲ್ಲಿ ಕುತೂಹಲ ಮೂಡಿಸಿದೆ.