ವಾಷಿಂಗ್ಟನ್, ಅಮೆರಿಕ:ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವೆ ದ್ವಿಪಕ್ಷೀಯ ಸಭೆ ನಡೆದಿದ್ದು, ಎರಡೂ ರಾಷ್ಟ್ರಗಳ ಸಂಬಂಧವನ್ನು ಬಲಪಡಿಸಲು ಉಭಯ ದೇಶಗಳ ನಾಯಕರು ಪ್ರತಿಜ್ಞೆ ಮಾಡಿದರು.
ಈ ದ್ವಿಪಕ್ಷೀಯ ಶೃಂಗಸಭೆ ಅತ್ಯಂತ ಪ್ರಮುಖವಾಗಿದೆ. ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ನಾವು ಭೇಟಿಯಾಗುತ್ತಿದ್ದೇವೆ. ಭಾರತ ಮತ್ತು ಅಮೇರಿಕಾ ನಡುವಿನ ಬಲವಾದ ಸ್ನೇಹಕ್ಕಾಗಿ ಬೀಜಗಳನ್ನು ಬಿತ್ತಲಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಉಭಯ ನಾಯಕರು ಪರಸ್ಪರ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಬದ್ಧರಾಗಿರುವುದಾಗಿ ಹೇಳಿದ್ದು, ವ್ಯಾಪಾರದಲ್ಲಿ ಹೆಚ್ಚಿನದನ್ನು ಸಾಧಿಸಬೇಕಿದೆ. ಮುಂದಿನ ದಶಕದಲ್ಲಿ ಭಾರತ-ಅಮೆರಿಕದ ಬಾಂಧವ್ಯದಲ್ಲಿ ವ್ಯಾಪಾರವು ಒಂದು ಪ್ರಮುಖ ಅಂಶವಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಜೋ ಬೈಡನ್ ಪ್ರತಿದಿನ ನಾಲ್ಕು ಮಿಲಿಯನ್ ಇಂಡೋ-ಅಮೆರಿಕನ್ನರು ಅಮೆರಿಕವನ್ನು ಬಲಪಡಿಸುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಅತ್ಯಂತ ಪ್ರಬಲವಾಗಿ ಇರಬೇಕೆಂಬ ಇಚ್ಛೆಯಿದೆ ಎಂದರು.
ಇದನ್ನೂ ಓದಿ;Modi US visit: ಕಮಲಾ ಹ್ಯಾರಿಸ್ಗೆ ತನ್ನ ಅಜ್ಜನ ವಸ್ತುಗಳನ್ನು ಗಿಫ್ಟ್ ಕೊಟ್ಟ ಪ್ರಧಾನಿ ಮೋದಿ