ಕ್ಯಾಲಿಫೋರ್ನಿಯಾ: ಕಾಳ್ಗಿಚ್ಚಿನ ಅಬ್ಬರಕ್ಕೆ ತತ್ತರಿಸಿರುವ ಕ್ಯಾಲಿಫೋರ್ನಿಯಾದಲ್ಲಿ 4 ಮಿಲಿಯನ್ ಎಕರೆ (1.6 ಮಿಲಿಯನ್ ಹೆಕ್ಟೇರ್) ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಗೆಗೆ 31 ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ತಮ್ಮ ಮನೆಗಳನ್ನ ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ.
ದುರದೃಷ್ಟವಶಾತ್ ಆಗಸ್ಟ್ 15ರಿಂದ ಈವರೆಗೆ ಕ್ಯಾಲಿಫೋರ್ನಿಯಾದಲ್ಲಿನ ಕಾಳ್ಗಿಚ್ಚು 3.98 ಮಿಲಿಯನ್ ಎಕರೆಯಷ್ಟು ಅಂದರೆ 15,500 ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಸುಟ್ಟುಹಾಕಿದೆ. ಕ್ಯಾಲಿಫೋರ್ನಿಯಾ ಇತಿಹಾಸದಲ್ಲಿ ಇದು ಹಿಂದೆಂದೂ ಸಂಭವಿಸಿಲ್ಲ ಎಂದು ಕ್ಯಾಲಿಫೋರ್ನಿಯಾದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಜೊನಾಥನ್ ಕಾಕ್ಸ್ ಹೇಳಿದ್ದಾರೆ.
ಕಾಳ್ಗಿಚ್ಚಿನ ಅಬ್ಬರಕ್ಕೆ ತತ್ತರಿಸಿದ ಕ್ಯಾಲಿಫೋರ್ನಿಯಾ ಹಲವು ಅಧ್ಯಯನಗಳು ಹಾಗೂ ವಿಜ್ಞಾನಿಗಳು ಹೇಳುವ ಪ್ರಕಾರ, ಅಮೆರಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಸುಡುವಿಕೆ, ತೈಲ ಮತ್ತು ಅನಿಲ ಬಳಕೆಯಿಂದ ಹವಾಮಾನದಲ್ಲಿ ಬದಲಾವಣೆಯಾಗಿ ಕಾಳ್ಗಿಚ್ಚು ಸಂಭವಿಸಿದೆ. ಮುಂಬರುವ ದಶಕಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಹೆಚ್ಚು ತೀವ್ರತೆಯ ಇಂತಹ ಅನೇಕ ಕಾಳ್ಗಿಚ್ಚುಗಳಿಗೆ ಪ್ರಪಂಚ ಸಾಕ್ಷಿಯಾಗಲಿದೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಸಂಶೋಧನೆಗಳು ತಿಳಿಸಿವೆ.
ಕ್ಯಾಲಿಫೋರ್ನಿಯಾದ ವಿವಿಧ ಭಾಗಗಳಲ್ಲಿ ಸುಮಾರು 17,000 ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ವಿಮಾನದ ಮೂಲಕವೂ ಬೆಂಕಿ ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ.