ಲೇಕ್ವೀವ್:ಗಂಡು ಮಕ್ಕಳೇ ಬೇಕೆಂದು ಹಠಕ್ಕೆ ಬಿದ್ದು ಕೆಲವರು ಐದಾರು ಬಾರಿ ಹೆಣ್ಣುಮಕ್ಕಳನ್ನು ಹೆತ್ತಿರುವ ಘಟನೆಗಳನ್ನು ನೋಡಿದ್ದೇವೆ. ಆದ್ರೆ ಅಮೆರಿಕದ ಈ ದಂಪತಿ ಮಾತ್ರ ತುಂಬಾ ಡಿಫರೆಂಟ್. ಅವರಲ್ಲೇನು ವಿಶೇಷ ಅನ್ನೋದನ್ನು ನಾವ್ ನಿಮಗೆ ಹೇಳ್ತೇವೆ.
ಹೌದು, ಈ ದಂಪತಿ ಈಗಾಗಲೇ 14 ಮಂದಿ ಗಂಡು ಮಕ್ಕಳನ್ನು ಹೊಂದಿದ್ದಾರೆ. ಈಗ 15ನೇ ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗಾಗಿ ಕಟೇರಿ 15 ಬಾರಿ ಗರ್ಭ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕಟೇರಿ ಗುರುವಾರ 3.4 ಕೆ.ಜಿಯ ಹೆಣ್ಣು ಮಗು ಮ್ಯಾಗಿ ಜಯ್ನೆಗೆ ಜನ್ಮ ನೀಡುವ ಮೂಲಕ ಸಂಭ್ರಮಿಸಿದ್ದಾರೆ. ಈ ದಂಪತಿಯು ತಮ್ಮಿಚ್ಛೆಯಂತೆ ಸದ್ಯ ಹೆಣ್ಣುಮಗುವನ್ನು ಪಡೆದಿದ್ದು, ಇವರ ಸಂತಸ ಇಮ್ಮಡಿಯಾಗಿದೆ.
ಈ ಕುರಿತು ಕಟೇರಿ ಪತಿ ಜೇ ಮಾತನಾಡಿ, ನಾನು ಮತ್ತು ನನ್ನ ಪತ್ನಿ ಇಬ್ಬರೂ ಕೂಡ 45 ವಯಸ್ಸಿನವರಾಗಿದ್ದು, ಈ ಹೆಣ್ಣು ಮಗು ಜನಿಸಿರುವುದು ಬಹಳ ಸಂತೋಷಕರ ವಿಷಯ ಮತ್ತು ನಾವೆಲ್ಲ ಹೆಣ್ಣು ಮಗುವನ್ನು ಸ್ವಾಗತಿಸಲು ಕಾತರರಾಗಿದ್ದೆವು. ಈ ವರ್ಷ ಹಲವು ಕಾರಣಗಳಿಂದಾಗಿ ಸ್ಮರಣೀಯವಾಗಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.