ಕ್ಯಾಲಿಫೋರ್ನಿಯಾ :ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರ್ಸೀವರೆನ್ಸ್ ರೋವರ್ ನೌಕೆ ಫೆ.18ರಂದು ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಅಲ್ಲಿನ ಮೇಲ್ಮೈ ಕಲ್ಲುಗಳ ಮಾದರಿ ಕಳುಹಿಸಲಿದ್ದು, ಮಂಗಳನಲ್ಲಿ ಜೀವ ಅಸ್ತಿತ್ವದಲ್ಲಿತ್ತೆ ಎಂಬುದರ ಕುರಿತು ಹೆಚ್ಚಿನ ಅನ್ವೇಷಣೆ ನಡೆಸಲಿದೆ.
ಆದರೆ, ರೋವರ್‌ನ ಮಂಗಳನ ಅಂಗಳಕ್ಕೆ ಇಳಿಸಲು ಶ್ರಮಿಸಿದ ವಿಜ್ಞಾನಿಗಳಲ್ಲಿ ಭಾರತೀಯ ಮೂಲದವರು ಎಂಬುದು ಕೀರ್ತಿಯ ವಿಷಾರವಾದರೆ, ಅದರಲ್ಲೂ ಮಿಷನ್ ಮಂಗಳ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ವಾತಿ ಮೋಹನ್ ಮೂಲತಃ ಕರ್ನಾಟಕದವರಾಗಿದ್ದಾರೆ.
ಮಂಗಳ ಕಾರ್ಯಾಚರಣೆಗೆ ಮಾರ್ಗದರ್ಶನ ಮತ್ತು ನಿಯಂತ್ರಣ ತಂಡವನ್ನು ಕನ್ನಡತಿ ಬೆಂಗಳೂರು ಮೂಲದ ಸ್ವಾತಿ ಮೋಹನ್ ಲೀಡ್ ಮಾಡಿದ್ದಾರೆ. ತಮ್ಮ 9ನೇ ವಯಸ್ಸಿನಲ್ಲಿ 'ಸ್ಟಾರ್ ಟ್ರೆಕ್' ಟಿವಿ ಸಿರೀಸ್ ನೋಡಿ ವಿಶ್ವದ ಹೊಸ ಹಾಗೂ ಸುಂದರ ಪ್ರದೇಶಗಳನ್ನು ನೋಡಿ ಆಶ್ಚರ್ಯಗೊಂಡಿದ್ದರು. ಬಳಿಕ ಬ್ರಹ್ಮಾಂಡದಲ್ಲಿರುವ ಹೊಸ ಹಾಗೂ ಇನ್ನಷ್ಟು ಸುಂದರ ತಾಣಗಳನ್ನು ಪತ್ತೆ ಹಚ್ಚಲು ಆಸೆ ಪಟ್ಟಿದ್ದರು.