ಲಿಮಾ:ಉತ್ತರ ಪೆರುವಿನಲ್ಲಿ ಭಾನುವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಚರ್ಚ್ ಟವರ್ ಸೇರಿದಂತೆ ಸುಮಾರು 75 ಮನೆಗಳು ನೆಲಸಮಗೊಂಡಿವೆ. ಈ ದುರ್ಘಟನೆಯಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಪೆರುವಿನ ಜಿಯೋಫಿಸಿಕಲ್ ಇನ್‌ಸ್ಟಿಟ್ಯೂಟ್ ಪ್ರಕಾರ, 131 ಕಿಲೋಮೀಟರ್ (81 ಮೈಲಿಗಳು) ಆಳದಲ್ಲಿ ಬೆಳಗ್ಗೆ 5.52 (10:52 am GMT) ಕ್ಕೆ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪನದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದು, ಸುಮಾರು 75 ಮನೆಗಳು ಉರುಳಿ ಬಿದ್ದಿವೆ. ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಸಾಗುತ್ತಿದೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನವು ನೆರೆ ಪ್ರದೇಶ ಈಕ್ವೆಡಾರ್‌ನಲ್ಲಿಯೂ ಹಾನಿಯನ್ನುಂಟುಮಾಡಿದೆ. ಪೆರುವಿಯನ್ ಅಮೆಜಾನ್‌ನಲ್ಲಿನ ಸಾಂಟಾ ಮಾರಿಯಾ ಡಿ ನೀವಾದಿಂದ ಪೂರ್ವಕ್ಕೆ 98 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಕೇಂದ್ರ ಬಿಂದುವಾಗಿದೆ. ಇದು ಅಮೆಜೋನಿಯನ್ ಸ್ಥಳೀಯ ಜನರು ವಾಸಿಸುವ ವಿರಳ ಜನಸಂಖ್ಯೆಯ ಪ್ರದೇಶವಾಗಿದೆ.
ಭೂಕಂಪನದಿಂದ ಅಮೆಜಾನ್‌ನ ಲಾ ಜಲ್ಕಾ ಜಿಲ್ಲೆಯಲ್ಲಿ ವಸಾಹತುಶಾಹಿ ಯುಗದ ಚರ್ಚ್‌ನ 14 ಮೀಟರ್ ಗೋಪುರವು ಕುಸಿದಿದೆ. ವ್ಯಾಪಕ ವಿದ್ಯುತ್ ಕಡಿತವಾಗಿದೆ. ಕಂಪನದಿಂದಾಗಿ ರಸ್ತೆಗಳ ಮೇಲೆ ಬೃಹದಾಕಾರದ ಬಂಡೆಗಳು ಬಿದ್ದಿವೆ. ಇದರ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.