ಮಿಯಾಮಿ:ಭಾರತ ನಿನ್ನೆ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಉಡಾವಣೆ ಮಾಡಿದ್ದರ ಕುರಿತು ವಿಶ್ವದ ದೊಡ್ಡಣ್ಣ ಅಮೆರಿಕ ಅಪಸ್ವರ ಎತ್ತಿದೆ. ಇದರಿಂದ ಬಾಹ್ಯಾಕಾಶದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಲಿದೆ ಎಂದು ಆರೋಪಿಸಿದೆ.
ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶನಹಾನ್, ಭಾರತ ತನಗಾಗಿ ಉಡಾವಣೆ ಮಾಡಿದ ಈ ಸ್ಯಾಟಲೈಟ್ನಿಂದಾದ ಪರಿಣಾಮಗಳ ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ. ಬಾಹ್ಯಾಕಾಶದಲ್ಲಿ ಸ್ಯಾಟಲೈಟ್ನ ಅವಶೇಷಗಳು ಉಳಿಯುವುದರಿಂದ ಅಲ್ಲಿನ ವ್ಯವಸ್ಥೆ ಏರುಪೇರಾಗುತ್ತದೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಬಾಹ್ಯಾಕಾಶದಲ್ಲಿ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಬೇಕು. ಎಲ್ಲರ ಕಾರ್ಯಗಳಿಗೂ ಬಾಹ್ಯಾಕಾಶ ಮುಕ್ತವಾಗಿರಬೇಕು ಎಂದಿದ್ದಾರೆ.
ಸ್ಯಾಟಲೈಟ್ನ ಅವಶೇಷಗಳು ವಾರದೊಳಗೆ ನಾಶಗೊಂಡು, ಭೂಮಿ ಮೇಲೆ ಬೀಳುತ್ತವೆ. ಈಗಾಗಲೆ ಸ್ಯಾಟಲೈಟ್ ಪ್ರಯೋಗದಿಂದ 250 ಅವಶೇಷಗಳ ತುಣುಕುಗಳು ಭೂಮಿಗೆ ಬಿದ್ದಿರುವ ಬಗ್ಗೆ ಮಿಲಿಟರಿ ಸ್ಟ್ರಾಟೆಜಿಕ್ ಕಮ್ಯಾಂಡ್ ಪತ್ತೆ ಮಾಡಿದೆ ಎಂದು ಪೆಂಟಗಾನ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದಾವೆ ಈಸ್ಟ್ಬರ್ನ್ ಹೇಳಿದ್ದಾರೆ. ಬಾಹ್ಯಾಕಾಶವನ್ನು ಹಾಳು ಮಾಡಿದರೆ, ಮತ್ತೆ ಪಡೆಯಲಾಗದು ಎಂದು ಭಾರತದ ಹೆಸರು ಉಲ್ಲೇಖಿಸದೆ ಅವರು ಟೀಕಿಸಿದ್ದಾರೆ.
ಆದರೆ 1959ರಲ್ಲಿಯೇ ಇಂತಹುದೊಂದು ಸ್ಯಾಟಲೈಟ್ ಉಡಾವಣೆ ಮಾಡಿರುವ ಅಮೆರಿಕ, ಭಾರತದ ಕಾರ್ಯಕ್ಕೆ ಮಾತ್ರ ಟೀಕೆ ವ್ಯಕ್ತಪಡಿಸುತ್ತಿದೆ.