ವಾಷಿಂಗ್ಟನ್: ಹೆಚ್-1ಬಿ ವೀಸಾ ಸಂಬಂಧ ಹೊಸ ಕಾನೂನನ್ನು ಅಮೆರಿಕ ಸಂಸತ್ತಿನಲ್ಲಿ (ಕಾಂಗ್ರೆಸ್) ರಿಪಬ್ಲಿಕನ್ ಪಕ್ಷದ ಮೂವರು ಶಾಸಕರು ಮಂಡಿಸಿದ್ದಾರೆ.
ಅಮೆರಿಕ ಕಾಂಗ್ರೆಸ್ನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಂಡನೆಯಾಗಿರುವ ಹೊಸ ಕಾನೂನಿನ ಪ್ರಕಾರ, ಹೆಚ್-1ಬಿ ವೀಸಾ ಮೂಲಕ ಅಮೆರಿಕ ಕಂಪನಿಗಳಿಗೆ ಸೇರುತ್ತಿರುವ ವಿದೇಶಿ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳದಂತೆ ಉದ್ಯೋಗದಾತರು ತಡೆಯಬೇಕಾಗಿದೆ. ಅಲ್ಲದೇ ಅಮೆರಿಕ ಕಾರ್ಮಿಕರಿಗಿಂತ ವಿದೇಶಿಗರಿಗೆ ಹೆಚ್ಚಿನ ವೇತನ ನೀಡುವುದಕ್ಕೆ ನಿರ್ಬಂಧ ಹೇರುವ ಪ್ರಸ್ತಾಪ ಮಾಡಲಾಗಿದೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರ ವಿಚಾರ: ಭಾರತ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದ ಅಮೆರಿಕ
ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಹೆಚ್-1ಬಿ ವೀಸಾ ಯೋಜನೆಯನ್ನು ಕೂಲಂಕಷವಾಗಿ ಪರಿಶೀಲಿಸಲು ರಿಪಬ್ಲಿಕನ್ ಶಾಸಕರು ಬುಧವಾರ ಪ್ರಸ್ತಾಪಿಸಿದ್ದಾರೆ. ಇದು ಭಾರತೀಯ ಐಟಿ ಉದ್ಯೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ ಮೂವರು ಸಂಸದರು ಮಂಡಿಸಿರುವ ಈ ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಸೃಷ್ಟಿಯಾಗುವ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ ಹೆಚ್-1ಬಿ ಸೇರಿದಂತೆ ಹಲವಾರು ಉದ್ಯೋಗ ವೀಸಾಗಳ ಮೇಲೆ ಅಂದಿನ ಡೊನಾಲ್ಟ್ ಟ್ರಂಪ್ ಸರ್ಕಾರ ನಿರ್ಬಂಧ ಹೇರಿತ್ತು.