ವಾಷಿಂಗ್ಟನ್: ಟೆಕ್ ದೈತ್ಯ ಸಂಸ್ಥೆಯೂ ಆಗಿರುವ ಅಮೆಜಾನ್‌ಗೆ ಹೊಸ ಸಂಕಷ್ಟ ಎದುರಾಗಿದ್ದು, ಇತರ ಸಂಸ್ಥೆಗಳೊಂದಿಗೆ ಸ್ಪರ್ಧೆಗಾಗಿ ತನ್ನ ಹಿಂದಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಒಂದು ವೇಳೆ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಅಮೆರಿಕದ ಹೌಸ್ ಜನಪ್ರತಿನಿಧಿಗಳು ಕೊನೆಯ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಅಮೆಜಾನ್ ಅಧ್ಯಕ್ಷ ಹಾಗೂ ಸಿಇಒ ಆಂಡಿ ಜಾಸ್ಸಿ ಅವರಿಗೆ ಪತ್ರ ಕಳುಹಿಸಿದ್ದು, ನವೆಂಬರ್ 1ರೊಳಗೆ ಕಂಪನಿಯ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಹಾಗೂ ಹೊಸ ದಾಖಲೆಗಳು ಮತ್ತು ಪುರಾವೆಗಳನ್ನು ತಮಗೆ ಒದಗಿಸಬೇಕೆಂದು ಸೂಚಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆ ಟೆಕ್ ಮಾರುಕಟ್ಟೆಮ ಮೇಲೆ ಪ್ರಾಬಲ್ಯ ಸಾಧಿಸಲು ಕೈಗೊಂಡ ಕ್ರಮಗಳ ಬಗ್ಗೆ ಹೌಸ್ ಜ್ಯುಡಿಷಿಯಲ್ ಕಮಿಟಿ ತನಿಖೆ ಮಾಡಿದ್ದು, ಈ ವೇಳೆ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಕ್ರಿಮಿನಲ್ ತನಿಖೆಗಾಗಿ ನ್ಯಾಯಾಂಗ ಇಲಾಖೆಗೆ ಪ್ರಕರಣವನ್ನು ಉಲ್ಲೇಖಿಸಲು ಆಂಟಿ ಟ್ರಸ್ಟ್ ಉಪಸಮಿತಿ ಪರಿಗಣಿಸುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುವ ವ್ಯಾಪಾರಗಳನ್ನು ನಾಕ್ - ಆಫ್ ಅಥವಾ ತದ್ರೂಪವಾದ ಉತ್ಪನ್ನಗಳ ಮೂಲಕ ಕಡಿಮೆ ಮಾಡುವ, ಸೈಟ್‌ನಲ್ಲಿ ಅವುಗಳ ಇರುವಿಕೆಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳ ಬಗ್ಗೆ ಇತ್ತೀಚಿನ ಮಾಧ್ಯಮ ವರದಿಗಳನ್ನು ಇದು ಉಲ್ಲೇಖಿಸಿದೆ.
ನ್ಯಾಯಾಂಗ ಸಮಿತಿಯ ಅಧ್ಯಕ್ಷ ಜೆರೋಲ್ಡ್ ನಾಡ್ಲರ್, ಡಿ-ಎನ್ವೈ ಹಾಗೂ ಆಂಟಿಟ್ರಸ್ಟ್ ಪ್ಯಾನೆಲ್‌ನ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ನಾಯಕರು ಇದಕ್ಕೆ ಸಹಿ ಹಾಕಿದ್ದಾರೆ. ದಾಖಲೆಯನ್ನು ಸರಿಪಡಿಸಲು ಮತ್ತು ಅಪರಾಧದ ತನಿಖೆಗಾಗಿ ನ್ಯಾಯಾಂಗ ಇಲಾಖೆಗೆ ಈ ವಿಷಯವನ್ನು ಉಲ್ಲೇಖಿಸುವುದು ಸೂಕ್ತವೇ ಎಂದು ನಾವು ಪರಿಗಣಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದೆ. ಜುಲೈನಲ್ಲಿ ಸಿಯಾಟಲ್ ಮೂಲದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್‌ನಿಂದ ಆಂಡಿ ಜಾಸ್ಸಿ ಉನ್ನತ ಹುದ್ದೆಯನ್ನು ವಹಿಸಿಕೊಂಡಿದ್ದರು. ಬೆಜೋಸ್ ಸದ್ಯ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ.
ಮಾರುಕಟ್ಟೆ, ಉತ್ಪನ್ನಗಳು, ಮಾರಾಟಗಾರರ ಬಗ್ಗೆ ಅತಿ ಸೂಕ್ಷ್ಮ ಹಾಗೂ ಇತರ ಮಾಹಿತಿಗಳನ್ನು ಅಮೆಜಾನ್ ಬಳಸಿಕೊಂಡಿದೆ ಎಂದು ಇತ್ತೀಚಿಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ಆದರೆ, ಅಮೆಜಾನ್ ಎಲ್ಲ ಆರೋಪಗಳನ್ನು ನಿರಾಕರಿಸಿತ್ತು. ಸಂಸ್ಥೆ ನಿಯಮಗಳ ಪ್ರಕಾರವೇ ನಡೆದುಕೊಂಡಿದೆ ಎಂದು ಸ್ಪಷ್ಟನೆ ನೀಡಿತ್ತು.