ವಾಷಿಂಗ್ಟನ್ ಡಿಸಿ: ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಗುರುವಾರ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 12 ಸೇನಾ ಸಿಬ್ಬಂದಿ ಸಾವನ್ನಪ್ಪಿ, 15 ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಅಮೆರಿಕಾ, ಇದಕ್ಕೆ ಕಾರಣವಾದ ಸಂಘಟನೆಗಳನ್ನು ಸುಮ್ಮನೆ ಬಿಡಲ್ಲ ಎಂದು ಶಪಥ ಮಾಡಿದೆ.
ಬಾಂಬ್ ದಾಳಿ ಮಾಡಿ ಅಮೆರಿಕನ್ನರ ಸಾವಿಗೆ ಕಾರಣವಾದ ಸಂಘಟನೆಯ ವಿರುದ್ಧ ದಾಳಿ ಮಾಡುತ್ತೇವೆ. ನಾವು ಇದನ್ನು ಕ್ಷಮಿಸಲ್ಲ. ಜೊತೆಗೆ ಇದನ್ನು ಮರೆಯುವುದೂ ಇಲ್ಲ. ನಿಮ್ಮನ್ನು ಬೇಟೆಯಾಡಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಪಥ ಮಾಡಿದ್ದಾರೆ.
ಈ ದಾಳಿ ಕಾರಣರಾದ ಐಸಿಸ್ ನಾಯಕರ ಬಗ್ಗೆ ನಮಗೆ ಗೊತ್ತು. ಬೃಹತ್ ಮಿಲಿಟರಿ ಕಾರ್ಯಾಚರಣೆ ಇಲ್ಲದೆ ನಮ್ಮದೇ ರೀತಿಯಲ್ಲಿ ಅವರು ಎಲ್ಲೇ ಇದ್ದರೂ ಹುಡುಕಿ ಹೊಡೆಯುತ್ತೇವೆ ಎಂದು ಬೈಡನ್ ತಿಳಿಸಿದ್ದಾರೆ.