ವಾಷಿಂಗ್ಟನ್: ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಚುನಾವಣೆ ಪೂರ್ವ ಸಮೀಕ್ಷೆಯೊಂದು ಹಾಲಿ ಅಧ್ಯಕ್ಷ ಟ್ರಂಪ್ಗೆ ಶಾಕ್ ನೀಡಿದೆ.
ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತಂತೆ ಸಮೀಕ್ಷೆಯೊಂದು ಹೊರಬಿದ್ದಿದ್ದು, ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಜೋ ಬಿಡೆನ್ ಮೇಲುಗೈ ಸಾಧಿಸಿದ್ದಾರೆ.
ನವೆಂಬರ್ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ, ಇದೇ ವಾರದಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈಗ ದಿ ಹಿಲ್ ವರದಿ ಮಾಡಿದ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ, ಬಿಡೆನ್ಗೆ ಶೇ. 50ಷ್ಟು ಮತ ಬೆಂಬಲವಿದ್ದರೆ, ಟ್ರಂಪ್ಗೆ ಶೇ.44ರಷ್ಟು ಮತಗಳು ಸಿಗಲಿವೆ. ಇನ್ನುಳಿದ ಶೇ. 7ರಷ್ಟು ಮತಗಳು ಯಾರ ಪಾಲಾಗಲಿವೆ ಎಂಬುದು ತಿಳಿದಿಲ್ಲ. 4,035 ಮತದಾರರನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗಿದೆ.
ಇದಕ್ಕೂ ಮುನ್ನ ರಿಪಬ್ಲಿಕನ್ ಸಮಾವೇಶ ಆರಂಭದ ಹಿಂದಿನ ದಿನ ಆ. 23ರಂದು ನಡೆದ ಸಮೀಕ್ಷೆಯಲ್ಲಿ ಬಿಡೆನ್ ಹಾಗೂ ಟ್ರಂಪ್ ನಡುವಿನ ಮತಗಳ ಶೇ. ಅಂತರ 52-42 ಆಗಿತ್ತು. ಅದಕ್ಕೆ ಹೋಲಿಸಿದರೆ ಬಿಡೆನ್ರ ಮತಗಳ ಗಳಿಕೆಯಲ್ಲಿ ಶೇ.2ರಷ್ಟು ಪ್ರಮಾಣದ ಇಳಿಕೆಯಾಗಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆಯು ಈ ವರ್ಷ ನವೆಂಬರ್ 3ರಂದು ನಡೆಯಲಿದೆ.