ವಾಷಿಂಗ್ಟನ್: ಭಾರತ- ಅಮೆರಿಕ ಮಧ್ಯೆ ಆರ್ಥಿಕತೆ ಮತ್ತು ಸಂಬಂಧ ವೃದ್ಧಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ದಕ್ಷಿಣ ಏಷ್ಯಾಗೆ ನಾಮ ನಿರ್ದೇಶನಗೊಂಡಿರುವ ಹಿರಿಯ ಯುಎಸ್ ರಾಜತಾಂತ್ರಿಕರು ಮತ್ತು ಮಧ್ಯ ಏಷ್ಯಾ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ
ದಕ್ಷಿಣ ಏಷ್ಯಾ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡಿರುವ ಡೊನಾಲ್ಡ್ ಲು, ಸೆನೆಟ್ ವಿದೇಶಾಂಗ ಸಮಿತಿಯ ಸದಸ್ಯರಿಗೆ ಹೇಳಿದ್ದಾರೆ. ಭಾರತದೊಂದಿಗೆ ನಮ್ಮ ಕಾರ್ಯತಂತ್ರ, ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಇದನ್ನು ಮತ್ತಷ್ಟು ಬಲಪಡಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಾಗಿದೆ. ಆದರೆ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಬಗ್ಗೆ ನೇರವಾಗಿ ಮಾತಾಡಬೇಕಿದೆ ಎಂದರು.
ಭಾರತ-ಅಮೆರಿಕ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು. ಪ್ರಜಾಪ್ರಭುತ್ವವು ಶಾಂತಿ, ಸ್ಥಿರತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಉತ್ತೇಜಿಸುತ್ತವೆ ಎಂದು ಲು ತಿಳಿಸಿದ್ದಾರೆ. ವಿದೇಶಾಂಗ ಇಲಾಖೆಯಲ್ಲಿ 30 ವರ್ಷಗಳ ಅವಧಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಮಧ್ಯ ಏಷ್ಯಾದಲ್ಲಿ ಕೆಲಸ ಮಾಡಿದ್ದಾರೆ.
ಇಂಡೋ-ಅಮೆರಿಕ ಎರಡು ದೇಶಗಳು ಮುಕ್ತ ಮಾರುಕಟ್ಟೆಯಾಗಿದ್ದು, ನಾವು ಸ್ಥಿರ ಮತ್ತು ಅಂತರ್ಗತ ಜಾಗತಿಕ ಆರ್ಥಿಕತೆಯನ್ನು ನಿರ್ಮಿಸಬಹುದು. ವಿಶ್ವದ ಶೇಕಡಾ 60 ರಷ್ಟು ಲಸಿಕೆಗಳನ್ನು ಭಾರತ ಉತ್ಪಾದಿಸುತ್ತಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಜಾಗತಿಕ ಬಿಕ್ಕಟ್ಟಾಗಿರುವ ಕೋವಿಡ್ ನಿರ್ಮೂಲನೆಗಾಗಿ ಭಾರತದೊಂದಿಗೆ ಅಮೆರಿಕ ಕೆಲಸ ಮಾಡಲಿದೆ. ಹವಾಮಾನ ಬಿಕ್ಕಟ್ಟನ್ನು ಎದುರಿಸಲು ನಾವು ಪಾಲುದಾರರಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದಿದ್ದಾರೆ.