ಟೆಲ್ ಅವಿವ್, ಇಸ್ರೇಲ್ :ಜಾಗತಿಕ ಮಟ್ಟದಲ್ಲಿ ಒಂದು ರೀತಿಯ ಆತಂಕ ಮತ್ತು ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿದ್ದ ಸ್ಫೈವೇರ್ ಸಾಫ್ಟ್ವೇರ್ ಪೆಗಾಸಸ್ ವಿಚಾರವಾಗಿ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಇಯಾಲ್ ಹುಟಾಲಾ ರಹಸ್ಯವಾಗಿ ಫ್ರಾನ್ಸ್ಗೆ ಭೇಟಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಸ್ರೇಲ್ನ ಎನ್ಎಸ್ಓ ಗ್ರೂಪ್ ಅಭಿವೃದ್ಧಿ ಪಡಿಸಿರುವ ಪೆಗಾಸಸ್ ಸ್ಪೈವೇರ್ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಇತರ ಹಿರಿಯ ಫ್ರೆಂಚ್ ಅಧಿಕಾರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಈ ವರದಿಗಳ ಬೆನ್ನಲ್ಲೇ ಫ್ರಾನ್ಸ್ ಸರ್ಕಾರ ಇಸ್ರೇಲ್ನೊಂದಿಗಿ ಕೆಲವು ರಾಜತಾಂತ್ರಿಕ ಸಂಬಂಧಗಳನ್ನು ಸ್ಥಗಿತಗೊಳಿಸಿತ್ತು. ಪೆಗಾಸಸ್ ಸ್ಪೈವೇರ್ ವಿರುದ್ಧ ಫ್ರಾನ್ಸ್ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿಯೇ ಇಯಾಲ್ ಹುಟಾಲಾ ಫ್ರಾನ್ಸ್ಗೆ ಭೇಟಿ ನೀಡಿದ್ದು, ಅಲ್ಲಿನ ಸರ್ಕಾರಕ್ಕೆ ವಿವರಣೆಯನ್ನು ನೀಡಲಿದ್ದಾರೆ. ಜೊತೆಗೆ ಈಗ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ಪ್ರಸ್ತಾಪವನ್ನು ಮಂಡಿಸಿದ್ದಾರೆ ಎಂದು ಇಸ್ರೇಲಿ ಸುದ್ದಿ ಸಂಸ್ಥೆ ವಾಲ್ಲಾ ವರದಿ ಮಾಡಿದೆ.