ಕರ್ನಾಟಕ

karnataka

ETV Bharat / international

ಕೊರೊನಾ ವೈರಸ್ ಖಚಿತವಾಗಿ ಚೀನಾ ನಿರ್ಮಿತ​?: ಸಾಕ್ಷಿ ಸಮೇತ ತೋರಿಸ್ತಾರಂತೆ ಟ್ರಂಪ್​ - ಜೈವಿಕ ಯುದ್ಧ

"ವೈರಸ್​ ಹುಟ್ಟಿದ್ದು ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋಗಾಲಯದಲ್ಲೇ. ಇದನ್ನು ಬಲವಾಗಿ ಒಪ್ಪುವ ವೈಜ್ಞಾನಿಕವಾಗಿ ಚಿಂತಿಸುವ ಜನರು, ಗುಪ್ತಚರ ಜನರು ನಮ್ಮಲ್ಲಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಿ, ಅಂತಿಮವಾಗಿ ತಕ್ಕ ಉತ್ತರವನ್ನೇ ಜಗತ್ತಿನ ಮುಂದಿಡುತ್ತೇವೆ. ಅಲ್ಲದೇ ಖುದ್ದು ಚೀನಾವೇ ಇದನ್ನು ಜಗತ್ತಿನ ಮುಂದೆ ಹೇಳಬಹುದು. ವುಹಾನ್​​ ಲ್ಯಾಬ್​ನಲ್ಲಿ ಕೊರೊನಾ ವೈರಸ್​ ಹರಡಿದೆ ಎನ್ನುವುದನ್ನು ಈಗ ಸಾಕ್ಷಿ ಸಮೇತ ಹೇಳಲು ಈಗ ನನಗೆ ಅನುಮತಿ ಇಲ್ಲ. ಇದಕ್ಕೆಲ್ಲಾ ಸೂಕ್ತ ಪುರಾವೆ, ಸಾಕ್ಷಿಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ಆ ದಿನ ತುಂಬಾ ದೂರದಲ್ಲಿಲ್ಲ ಎಂದು ಭಾವಿಸುತ್ತೇನೆ"- ಡೊನಾಲ್ಡ್​ ಟ್ರಂಪ್​, ಅಮೆರಿಕಾ ಅಧ್ಯಕ್ಷ

Is china created corona virus
ಕೊರೊನಾ ವೈರಸ್​

By

Published : May 1, 2020, 1:34 PM IST

Updated : May 2, 2020, 9:17 AM IST

ವುಹಾನ್/ವಾಷಿಂಗ್ಟನ್​: ಕೊರೊನಾ ವೈರಸ್​ ಮಾನವ ನಿರ್ಮಿತ. ಅದು ಯಾವುದೋ ಪ್ರಾಣಿಯೋ ಅಥವಾ ಪಕ್ಷಿಗಳಿಂದ ಸೃಷ್ಟಿಯಾದ ವೈರಸ್​ ಅಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳನ್ನು ನೇರವಾಗಿ ಗೆಲ್ಲಲಾಗದ ಚೀನಾ ತನ್ನ ಕಪಟ ಬುದ್ಧಿಯಿಂದ ಜೈವಿಕ ಯುದ್ಧ(biological war)ದ ಮೊರೆ ಹೋಗಿ, ಈ ಕೊರೊನಾ ವೈರಸ್​ಅನ್ನು ಸೃಷ್ಟಿಸಿದೆ. ಚೀನಾದ ಪ್ರಯೋಗಾಲಯದಲ್ಲಿ ಈ ವೈರಸ್​ ಲೀಕ್​ ಆಗಿದೆ. ಇದರಿಂದಾಗಿ ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಮೊದಲು ತಾನೇ ಬಾಧೆಪಟ್ಟ ಚೀನಾ, ಮತ್ತೆ ಜಗತ್ತಿಗೆ ಸೋಂಕು ಹಬ್ಬಿದೆ. ಹೀಗಾಗಿ ಜಗತ್ತಿನ ಇತರ ರಾಷ್ಟ್ರಗಳು ಈಗ ಸೋಂಕಿನಿಂದ ಒದ್ದಾಡಿ ಸಾಯುತ್ತಿದೆ.... ಇದು ಕೊರೊನಾ ವೈರಸ್​ ಹರಡಿರುವ ಬಗ್ಗೆ ಆರಂಭದಿಂದ ಕೇಳಿಬರುತ್ತಿರುವ ಸುದ್ದಿ.

ಇದು ನಿಜವಾ? ಈ ವೈರಸ್​ ಚೀನಾ ಸೃಷ್ಟಿಸಿದ್ದ? ಇದು ಜೈವಿಕ ಯುದ್ಧದ ಭಾಗವಾ? ಇದರಿಂದ ಜಾಗತಿಕ ನಾಶಕ್ಕೆ ಚೀನಾ ಮುನ್ನುಡಿ ಬರೆದಿದೆಯಾ? ಚೀನಾದಲ್ಲಿ ಇಂತಹ ವೈರಸ್​ ಸೃಷ್ಟಿಸೋ ಪ್ರಯೋಗಾಲಯ ಇದೆಯಾ? ವೈರಸ್​ ಹರಡಿದಾಗಿನಿಂದ ಇದಕ್ಕೆಲ್ಲಾ ಚೀನಾ ನೇರ ಹೊಣೆ ಎಂದಿದ್ದ ವಿಶ್ವದ ದೊಡ್ಡಣ್ಣನ ಮಾತಲ್ಲಿ ಹುರುಳಿದ್ಯಾ? ಈಗ ಟ್ರಂಪ್​ ಹೇಳುತ್ತಿರೋದು ಏನು? ಚೀನಾ ವೈರಸ್​ ಸೃಷ್ಟಿಸಿದ್ದಕ್ಕೆ ಟ್ರಂಪ್​ ಸಾಕ್ಷಿ ಒದಗಿಸ್ತಾರಾ? ಈ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಉತ್ತರ...

ಅಂದಹಾಗೆ ಕೊರೊನಾ ವೈರಸ್​ ಹುಟ್ಟಿದ್ದು ಚೀನಾದ ಹುಬೈ ಪ್ರಾಂತ್ಯದ ವುಹಾನ್​ ನಗರದಲ್ಲಿ. ಕಳೆದ ವರ್ಷದ ಅಂತ್ಯದಲ್ಲಿ ಹುಟ್ಟಿಕೊಂಡ ಈ ವೈರಸ್​ನಿಂದಾಗಿ ಚೀನಾದಲ್ಲಿ ಇಲ್ಲಿಯವರೆಗೆ 4633 ಜನ ಸಾವನ್ನಪ್ಪಿದ್ದು, ಒಟ್ಟು 82,874 ಜನರಿಗೆ ಸೋಂಕು ಹಬ್ಬಿದೆ. ಆದ್ರೆ ಆರಂಭದಲ್ಲಿ ಚೀನಾದಲ್ಲಿ ತೀವ್ರವಾಗಿ ಹಬ್ಬಿದ ಈ ಸೋಂಕು ಈಗ ಪಾಶ್ಚಿಮಾತ್ಯರ ನಾಡಲ್ಲಿ ಭಾರಿ ಹತೋಟಿಯಲ್ಲಿದೆ. ಇದು ಜಗತ್ತಿನ ಅನುಮಾನಕ್ಕೆ ಕಾರಣವಾಗಿರೋ ಒಂದು ಅಂಶ. ಚೀನಾದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕೇವಲ 599. ಉಳಿದೆಲ್ಲಾ ಸೋಂಕಿತರು ಗುಣಮುಖರಾಗಿದ್ದಾರೆ. ಆದ್ರೆ ಜಗತ್ತಿನ ಉಳಿದ ರಾಷ್ಟ್ರಗಳು ಈಗಲೂ ಸೋಂಕಿನಿಂದ ವಿಲವಿಲ ಒದ್ದಾಡುತ್ತಿವೆ.

ಆರಂಭದಲ್ಲೇ ಚೀನಾ ಮೇಲೆ ಆರೋಪಿಸಿದ್ದ ವಿಶ್ವದ ದೊಡ್ಡಣ್ಣ

ಹೀಗೊಂದು ಸುದ್ದಿ ಕೊರೊನಾ ವೈರಸ್​ ಹಬ್ಬಿದ ಆರಂಭದಿಂದಲೇ ಕೇಳಿಬರುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು ವಿಶ್ವದ ದೊಡ್ಡಣ್ಣನ ಹೇಳಿಕೆ. ವೈರಸ್​ ಹಬ್ಬಿದ ಆರಂಭದಲ್ಲೇ ಚೀನಾ ವಿರುದ್ಧ ರೊಚ್ಚಿಗೆದ್ದಿದ್ದ ಅಮೆರಿಕಾ ಅಧ್ಯಕ್ಷ ಟ್ರಂಪ್​, ಈ ವೈರಸ್​ ಹರಡಿದ್ದಕ್ಕೆ ಚೀನಾ ನೇರ ಹೊಣೆ. ಇದರಿಂದ ಜಗತ್ತಿಗಾಗುವ ನಷ್ಟವನ್ನು ಚೀನಾವೇ ಭರಿಸಬೇಕು ಎಂದು ರೋಷದಿಂದಾಡಿದ್ದರು. ಅಲ್ಲದೆ ವೈರಸ್​ ನಿಗ್ರಹಿಸುವಲ್ಲಿ ಚೀನಾದ ಕ್ರಮವನ್ನು ಬೇರೆ ರಾಷ್ಟ್ರಗಳು ಅನುಸರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದ ಮಾತಿಗೆ ತಿರುಗಿ ಬಿದ್ದಿದ್ದ ಟ್ರಂಪ್​, ಚೀನಾ ಸುಳ್ಳು ಅಂಕಿ-ಅಂಶ ನೀಡುತ್ತಿದೆ. ಆದರೂ ವಿಶ್ವಸಂಸ್ಥೆ ಚೀನಾವನ್ನೇ ಬೆಂಬಲಿಸುತ್ತಿದೆ ಎಂದು ದೂರಿದ್ದರು.

ಟ್ರಂಪ್​ ಚೀನಾದ ಮೇಲೆ ಹೇರಿದ್ದ ಆರೋಪಕ್ಕೆ ಜಗತ್ತಿನ ಹಲವೆಡೆಗಳಿಂದ ಬೆಂಬಲ ವ್ಯಕ್ತವಾಗಿತ್ತು. ಚೀನಾವೇ ವೈರಸ್​ ಸೃಷ್ಟಿಸಿದೆ ಎಂದು ಹೇಳದಿದ್ದರೂ, ಚೀನಾದ ಕೈವಾಡವಂತೂ ಇರಬಹುದು ಎಂಬುದು ಭಾಗಶಃ ರಾಷ್ಟ್ರಗಳ ಅಭಿಪ್ರಾಯ. ಇದರಿಂದ ಭಾರತವೂ ಹೊರತಾಗಿಲ್ಲ.

ಕೊರೊನಾ ವೈರಸ್​ ಮಾನವ ಸೃಷ್ಟಿಯಲ್ಲ ಎಂದ ಅಮೆರಿಕಾ ಗುಪ್ತಚರ ಸಂಸ್ಥೆ

ಕೊರೊನಾ ಸೋಂಕು ಹಬ್ಬಿಸಿ, ಆರಂಭದಲ್ಲಿ ಅದರ ಬಗ್ಗೆ ಎಲ್ಲವೂ ತಿಳಿದಿದ್ದರೂ ಚೀನಾ ಮಾಹಿತಿ ನೀಡಲಿಲ್ಲ. ತ್ವರಿತವಾಗಿ ಕಾರ್ಯಪ್ರವೃತವಾಗುವಲ್ಲಿ ಚೀನಾ ವಿಫಲವಾಗಿದೆ ಎಂದು ಟ್ರಂಪ್​ ಆರೋಪಿಸಿದ್ದರು. ಆದ್ರೆ ಈ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಆರಂಭಿಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೊರೊನಾ ವೈರಸ್ ಮಾನವ ನಿರ್ಮಿತವಲ್ಲ ಅಥವಾ ಆನುವಂಶಿಕವಾಗಿ ಮಾರ್ಪಡಿಸಲಾದ ಸೋಂಕಲ್ಲ ಎಂದಿವೆ. ಇದು ಟ್ರಂಪ್​ ಹೇಳಿಕೆಗೆ ದೊಡ್ಡ ಹೊಡೆತ ನೀಡಿದೆ.

ಸದ್ಯ ಚೀನಾದ ಮೇಲಿರೋ ಆರೋಪಗಳೆನು?

ಸದ್ಯ ಚೀನಾದ ಮೇಲೆ ಜಗತ್ತಿನ ಹಲವು ರಾಷ್ಟ್ರಗಳು ನೇರವಾಗಿ ಆರೋಪಿಸಿಲ್ಲದಿದ್ದರೂ, ಚೀನಾದ ಮೇಲೆ ಹೆಚ್ಚಿನ ಎಲ್ಲಾ ರಾಷ್ಟ್ರಗಳಿಗೆ ಅನುಮಾನವಂತೂ ಇದೆ. ಈ ಬಗ್ಗೆ ಅಲ್ಲಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಚಾರ ಭಾರಿ ಚರ್ಚೆಗೊಳಪಟ್ಟಿತ್ತು. ಚೀನಾ ಮೇಲಿರೋ ಈ ಅನುಮಾನ ಅಥವಾ ಆರೋಪಗಳು ಯಾವುವು ಗೊತ್ತಾ?

  1. ಕೊರೊನಾ ವೈರಸ್​ ಚೀನಾ ಸೃಷ್ಟಿಸಿದ್ದು.
  2. ಜೈವಿಕ ಯುದ್ಧದ ಭಾಗವಾಗಿ ಜೈವಿಕ ಅಸ್ತ್ರವಾಗಿ ಚೀನಾ ಕೊರೊನಾ ವೈರಸ್​ ಅನ್ನು ಸೃಷ್ಟಿ ಮಾಡಿ ಲೀಕ್​ ಮಾಡಿದೆ.
  3. ವುಹಾನ್​ನಲ್ಲಿರುವ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(Wuhan Institute of Virology) ಪ್ರಯೋಗಾಲಯದಲ್ಲಿ ಈ ವೈರಸ್​ ಅಚಾತುರ್ಯದಿಂದಲೋ ಅಥವಾ ಉದ್ದೇಶಪೂರಕವಾಗಿಯೋ ಲೀಕ್​ ಆಗಿದೆ.
  4. ಜಗತ್ತನ್ನು ನೇರ ಯುದ್ಧದಿಂದ ಮಣಿಸಲಾಗದೇ ಪರೋಕ್ಷ ಹಾದಿಯಲ್ಲಿ ಚೀನಾ ಅನುಸರಿಸುತ್ತಿದೆ.
  5. ಚೀನಾದಲ್ಲಿ ಬೇಗನೇ ವೈರಸ್​ ಹರಡಿದ್ದರೂ, ಈಗ ಭಾರಿ ಮಟ್ಟದಲ್ಲಿ ಅದು ಹತೋಟಿಗೆ ಬಂದಿದ್ದು ಹೇಗೆ?
  6. ಜಗತ್ತಿನಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ, ಈ ಬಗ್ಗೆ ಚೀನಾ ಇನ್ನೂ ಸ್ಪಷ್ಟನೆ ನೀಡಿಲ್ಲವೇಕೆ?
  7. ಎಲ್ಲಾ ರಾಷ್ಟ್ರಗಳು ದೇಶದ ಒಳಗೆ ಬರುವ ಅಥವಾ ದೇಶದಿಂದ ಹೊರಹೋಗುವ ವಿಮಾನಗಳನ್ನು ನಿಲ್ಲಿಸಿದ್ದರೆ, ಚೀನಾ ಮಾತ್ರ ಒಳಬರುವ ವಿಮಾನಗಳನ್ನು ಮಾತ್ರವೇ ನಿಲ್ಲಿಸಿ, ಬೇರೆ ದೇಶಗಳಿಗೆ ವಿಮಾನ ಹಾರಲು ಬಿಟ್ಟಿದ್ದೇಕೆ?

ಹೌದು, ಕೊರೊನಾ ವಿಚಾರವಾಗಿ ಚೀನಾದ ಇನ್ನೂ ಕೆಲವಷ್ಟು ನಿಗೂಢ ನಡೆ ಜಗತ್ತಿನ ಅನುಮಾನಗಳಿಗೆ ಕಾರಣವಾಗಿದೆ. ಆದರೂ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಆಗಲಿ, ಸರ್ಕಾರವಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಏನಿದು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ?

ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಚೀನಾ ಅಕಾಡೆಮಿ ಆಫ್ ಸೈನ್ಸಸ್ ನಿರ್ವಹಿಸುವ ವೈರಾಲಜಿ ಕುರಿತ ಸಂಶೋಧನಾ ಸಂಸ್ಥೆ. ಹುಬೈ ಪ್ರಾಂತ್ಯದ ವುಹಾನ್‌ನ ಜಿಯಾಂಗ್ಕ್ಸಿಯಾ ಜಿಲ್ಲೆಯಲ್ಲಿ ಈ ಸಂಸ್ಥೆಯಿದ್ದು, ಇದರಲ್ಲಿ ನಾಲ್ಕು ಪ್ರಯೋಗಾಲಯಗಳಿವೆ. ಇದೇ ಪ್ರಯೋಗಾಲಯಗಳಲ್ಲಿ ವೈರಸ್​ ಸೃಷ್ಟಿಯಾಗಿದೆ ಅನ್ನೋ ಅನುಮಾನ ಎದ್ದಿರೋದು.

ಏನಿದು ಜೈವಿಕ ಯುದ್ಧ?

ಜೈವಿಕ ಯುದ್ಧ ಅಥವಾ biological war, ಒಂದು ರೀತಿಯ ಪರೋಕ್ಷ ಯುದ್ಧ. ಜೈವಿಕ ಅಸ್ತ್ರಗಳನ್ನು ಬಳಸಿ ಶತ್ರುಗಳ ಮೇಲೆ ಆಕ್ರಮಣ ಮಾಡಲು ತೆಗೆದುಕೊಳ್ಳು ಹೇಡಿ ಮಾರ್ಗ. ವೈರಸ್​, ಬ್ಯಾಕ್ಟೀರಿಯಾಗಳಂತ ಜೈವಿಕ ಅಸ್ತ್ರಗಳನ್ನು ಸೃಷ್ಟಿಸಿ ಶತ್ರುಗಳು ಅಥವಾ ಬೇರೆ ರಾಷ್ಟ್ರಗಳ ಮೇಲೆ ಹರಿಬಿಟ್ಟು ಜನರನ್ನು ಸಾಯಿಸುವ ಮಾರ್ಗವೇ ಜೈವಿಕ ಯುದ್ಧ. ಜಗತ್ತಿನ ಪ್ರಬಲ ರಾಷ್ಟಗಳನ್ನು ನೇರ ಯುದ್ಧದಲ್ಲಿ ಸಾಯಿಸಲು ಸಾಧ್ಯವಾಗದೆ(ಸಾಮರ್ಥ್ಯದಿಂದ ಮಾತ್ರವಲ್ಲ, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಬಹಿಷ್ಕಾರಕ್ಕೊಳಗಾಗಬಹುದು ಎಂಬ ಭೀತಿಯೂ ಇರಬಹುದು) ಈ ಜೈವಿಕ ಯುದ್ಧದ ಭಾಗವಾಗಿ ಚೀನಾ ವೈರಸ್​ ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ.

ವೈರಸ್​ ಲೀಕ್​ ಆಗಿದ್ದು ಹೇಗೆ?

ಇಲ್ಲಿ ಎರಡು ಗುಮಾನಿಗಳಿವೆ. ಒಂದು, ವೈರಸ್​ ಸೃಷ್ಟಿಸಿ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರ ಅದನ್ನು ಲೀಕ್​ ಮಾಡುವ ಉದ್ದೇಶದಿಂದ ಪ್ರಯೋಗಾಲಯದಲ್ಲಿ ಶೇಖರಿಸಿಟ್ಟಾಗ, ಯಾವುದೋ ಯಡವಟ್ಟಿನಿಂದ ವೈರಸ್​ ಲೀಕ್​ ಆಗಿದೆ ಅನ್ನೋದು. ಇನ್ನೊಂದು ಇದರ ಪ್ರಯೋಗದ ವೇಳೆ ವೈರಸ್​​ ಹರಡಿ ಮೊದಲು ಸ್ವದೇಶಕ್ಕೇ ಕಂಟಕಪ್ರಾಯವಾಗಿ ಬಳಿಕ ಜಗತ್ತಿಗೇ ಹರಡಿದೆ ಅನ್ನೋದು.

ಮತ್ತೆ ಧ್ವನಿ ಎತ್ತಿದ ಟ್ರಂಪ್​...

ತನ್ನ ದೇಶದ ಗುಪ್ತಚರ ಸಂಸ್ಥೆಗಳೇ, ಕೊರೊನಾ ವೈರಸ್​ ಮಾನವ ನಿರ್ಮಿತವಲ್ಲ ಎಂದು ಹೇಳುತ್ತಿದ್ದರೂ ಇದನ್ನು ಒಪ್ಪದ ಟ್ರಂಪ್​, ವೈರಸ್​ ಹುಟ್ಟಿದ್ದು ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರಯೋಗಾಲಯದಲ್ಲೇ. ಇದನ್ನು ಬಲವಾಗಿ ಒಪ್ಪುವ ವೈಜ್ಞಾನಿಕವಾಗಿ ಚಿಂತಿಸುವ ಜನರು, ಗುಪ್ತಚರ ಜನರು ಮತ್ತು ಇತರರು ನಮ್ಮಲ್ಲಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಿ, ಅಂತಿಮವಾಗಿ ತಕ್ಕ ಉತ್ತರವನ್ನೇ ನಾವು ಜಗತ್ತಿನ ಮುಂದಿಡುತ್ತೇವೆ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಖುದ್ದು ಚೀನಾವೇ ಇದನ್ನು ಜಗತ್ತಿನ ಮುಂದೆ ಹೇಳಬಹುದು ಎಂದು ಟ್ರಂಪ್​ ಹೇಳಿದ್ದಾರೆ.

ಪುರಾವೆಯನ್ನು ನಾನು ಈಗ ಹೇಳುವ ಹಾಗಿಲ್ಲ...

ವುಹಾನ್​​ ಲ್ಯಾಬ್​ನಲ್ಲಿ ಕೊರೊನಾ ವೈರಸ್​ ಹರಡಿದೆ ಎನ್ನುವುದಕ್ಕೆ ನಿಮ್ಮಲ್ಲಿ ಯಾವ ಪುರಾವೆಗಳಿವೆ ಎಂಬ ಪ್ರಶ್ನೆಗೆ ಉತ್ತರಿಸಿರುದ ಟ್ರಂಪ್, ನಾನದನ್ನು ಈಗ ನಿಮಗೆ ಹೇಳುವ ಹಾಗಿಲ್ಲ. ಅದನ್ನು ಹೇಳಲು ನನಗೆ ಅನುಮತಿ ಇಲ್ಲ ಎಂದು ಟ್ರಂಪ್​ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಇಷ್ಟೆಲ್ಲಾ ಆರೋಪದ ನಡುವೆಯೂ ಟ್ರಂಪ್, ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿಲ್ಲ. "ನಾನು ಅದನ್ನು ಹೇಳಲು ಬಯಸುವುದಿಲ್ಲ, ಇದು ಚೀನಾದಿಂದ ಹೊರಬಂತು ಮತ್ತು ಅದನ್ನು ಅವರು ನಿಲ್ಲಿಸಬಹುದಿತ್ತು. ಅವರು ಅದನ್ನು ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಅಲ್ಲದೆ ಇದನ್ನೇ ಇಡೀ ಜಗತ್ತು ಬಯಸುತ್ತಿದೆ ಎಂದು ಟ್ರಂಪ್​ ಹೇಳಿದ್ದಾರೆ.

ಕೊರೊನಾ ಆರಂಭವಾಗುತ್ತಿದ್ದಂತೆ, ಚೀನಾ ತನ್ನ ದೇಶಕ್ಕೆ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಬ್ರೇಕ್​ ಹಾಕಿತು. ಆದ್ರೆ ಅದೇ ಚೀನಾ ತನ್ನ ದೇಶದಿಂದ ಇತರ ದೇಶಗಳಿಗೆ ಹಾರುವ ವಿಮಾನಗಳಿಗೆ ನಿರ್ಬಂಧ ಹೇರಿಲ್ಲ. ಇದರ ಉದ್ದೇಶವೇನು ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.

ಚೀನಾ ಎಲ್ಲಾ ರೀತಿಯಲ್ಲೂ ಬಲಶಾಲಿ ರಾಷ್ಟ್ರ. ಅವರಿಗೆ ಈ ವೈರಸ್​ ಲೀಕ್​ ಆಗುವುದನ್ನು ತಡೆಹಿಡಿಯಬಹುದಿತ್ತು. ಆದ್ರೆ ಚೀನಾ ಅದನ್ನು ಮಾಡಿಲ್ಲ. ಇದರ ಉದ್ದೇಶವೇನು ಎಂದು ಟ್ರಂಪ್​ ಪ್ರಶ್ನಿಸಿದ್ದಾರೆ.

ಇಡೀ ಜಗತ್ತೇ ಈಗ ವೈರಸ್​ನಿಂದಾಗಿ ಒದ್ದಾಡುತ್ತಿದೆ. ಜಗತ್ತಿನ ಇತರ ರಾಷ್ಟ್ರಗಳು ಕಾಣದ ಸಾವು-ನೋವನ್ನು ನಮ್ಮ ದೇಶ ಕಾಣುತ್ತಿದೆ. ಹೀಗಾಗಿ ಇದಕ್ಕೆಲ್ಲಾ ಸೂಕ್ತ ಪುರಾವೆ, ಸಾಕ್ಷಿಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ಆ ದಿನ ತುಂಬಾ ದೂರದಲ್ಲಿಲ್ಲ ಎಂದು ಭಾವಿಸುತ್ತೇನೆ ಎಂದು ಟ್ರಂಪ್​ ಹೇಳಿದ್ದಾರೆ.

ಏನೇ ಇರಲಿ. ಕಣ್ಣಿಗೆ ಕಾಣದ ವೈರಸ್​ ಈಗ ಜಗತ್ತೇ ನಲುಗುವಂತೆ ಮಾಡಿದೆ. ಇದರಲ್ಲಿ ನಿಜವಾಗಿಯೂ ಚೀನಾದ ಕೈವಾಡವಿದೆಯೋ ಇಲ್ಲವೋ ಗೊತ್ತಿಲ್ಲ. ಇದು ಸಾಕ್ಷಿ ಸಮೇತ ಸಾಬೀತಾದರೆ, ಚೀನಾ ಜಗತ್ತಿನ ಮುಂದೆ ಬೆತ್ತಲಾಗುತ್ತದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಸಂಸ್ಥೆಗಳಿಂದಲೂ ಬಹಿಷ್ಕಾರಕ್ಕೊಳಗಾಗುವ ಸಾಧ್ಯತೆ ಇದೆ.

Last Updated : May 2, 2020, 9:17 AM IST

ABOUT THE AUTHOR

...view details