ಬೆಲ್ಜಿಯಂ: 2018ರಲ್ಲಿ ಫ್ರಾನ್ಸ್ನಲ್ಲಿ ಗಡಿಪಾರು ಮಾಡಿದ ಇರಾನಿನ ವಿರೋಧಿ ಗುಂಪಿನ ವಿರುದ್ಧ ಬಾಂಬ್ ದಾಳಿಯ ಸಂಚು ಹೂಡಿದ್ದ ಮಾಸ್ಟರ್ ಮೈಂಡ್ ಇರಾನಿಯನ್ ಎಜೆಂಟ್ಗೆ 20 ವರ್ಷ ಶಿಕ್ಷೆ ವಿಧಿಸಿ ಬೆಲ್ಜಿಯಂ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾದ ವಿಯೆನ್ನಾ ಮೂಲದ ರಾಜತಾಂತ್ರಿಕ ಅಧಿಕಾರಿ ಅಸ್ಸಾದುಲ್ಲಾ ಅಸ್ಸಾದಿ ಕಳೆದ ವರ್ಷ ತನ್ನ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯ ಹೇಳಲು ನಿರಾಕರಿಸಿದ್ದ. ಬಳಿಕ ಬೆಲ್ಜಿಯಂ ಪೊಲೀಸರು ಸತತ ವಿಚಾರಣೆ ನಡೆಸಿದ್ದರು.
ಇವರಲ್ಲದೇ ಇನ್ನೂ ಮೂವರು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಹಿನ್ನೆಲೆ ದೀರ್ಘಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಇರಾನಿನ ಉನ್ನತ ಮೂಲಗಳ ಆದೇಶದಂತೆ ದಾಳಿ ನಡೆಸಲು ಇವರು ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಅಷ್ಟೇ ಅಲ್ಲ ವಿಚಾರಣೆ ವೇಳೆ ಮುಜಾಯಿದ್ದೀನ್-ಇ-ಖಲ್ಕಾ ಸಂಘಟನೆಯವರು ಕೃತ್ಯ ಎಸಗಲು ಮುಂದಾಗಿರುವುದಾಗಿಯೂ ಒಪ್ಪಿಕೊಂಡಿದ್ದರು.
ಬಾಂಬ್ ಗುಣಮಟ್ಟದ್ದಾಗಿತ್ತು ಎಂದು ಬೆಲ್ಜಿಯಂನ ಬಾಂಬ್ ನಿಷ್ಕ್ರಿಯ ದಳ ಹೇಳಿಕೆ ನೀಡಿತ್ತು. ಈ ಸ್ಫೋಟದಿಂದ ಸಾಕಷ್ಟು ಸಾವು-ನೋವು ಉಂಟುಮಾಡಬಹುದಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿತ್ತು. ಅಷ್ಟೇ ಏಕೆ ಅಂದು ಅಂದಾಜು 25,000 ಜನರು, ಆ ದಿನ ಪ್ಯಾರಿಸ್‌ನ ಉತ್ತರದ ಫ್ರೆಂಚ್ ಪಟ್ಟಣವಾದ ವಿಲ್ಲೆಪಿಂಟೆಯಲ್ಲಿ ಒಟ್ಟುಗೂಡಿದ್ದರು. ಒಂದು ವೇಳೆ ಸ್ಫೋಟಗೊಂಡಿದ್ದರೆ ಬಹಳಷ್ಟು ಹಾನಿಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದರು.
ಯು.ಎಸ್ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತವು ತೆಹರಾನ್ ಜತೆ ಮಾತುಕತೆಗೆ ಸಿದ್ದವಾಗುತ್ತಿರುವ ವೇಳೆಯೇ ಅಸ್ಸಾದಿ ಅಪರಾಧಿ ಎಂದು ಗುರುತಿಸಲ್ಪಟ್ಟಿರುವುದು ಇರಾನ್ ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ. 2018ರಲ್ಲಿ ಅಮೆರಿಕವನ್ನು ಪರಮಾಣು ಒಪ್ಪಂದದಿಂದ ಹೊರಹಾಕಿದ ನಂತರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಮೇಲೆ ಹೇರಿದ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವ ನಿರೀಕ್ಷೆಯಿದೆ ಎಂದು ಇರಾನ್ ಕಳೆದ ತಿಂಗಳು ತಿಳಿಸಿತ್ತು.
ಇದನ್ನೂ ಓದಿ:ಐಸ್ ಪ್ಲಾಂಟ್ನಲ್ಲಿ ಅಮೋನಿಯಾ ಸೋರಿಕೆ: ಇಬ್ಬರ ಸಾವು, 90 ಮಂದಿ ಅಸ್ವಸ್ಥ