ಟೆಹರಾನ್: ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು ನಾವೇ, ಇದು ಮಾನವ ದೋಷದಿಂದ ಉಂಟಾದ ದಾಳಿ ಎಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.
ಉಕ್ರೇನ್ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ ಎಂದು ಅಮೆರಿಕಾ ಎಷ್ಟೇ ಆರೋಪ ಮಾಡಿದ್ದರು, ಇದನ್ನು ಒಪ್ಪಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದ ಇರಾನ್ ಸೇನಾಪಡೆ ಕೊನೆಗೂ ತಾವೇ ಮಾಡಿದ್ದು ಎಂದು ಒಪ್ಪಿಕೊಂಡಿದೆ. ಈ ಹಿನ್ನೆಲೆ ಅಧ್ಯಕ್ಷ ಹಸನ್ ರೊಹಾನಿ ಪ್ರತಿಕ್ರಿಯೆ ನೀಡಿದ್ದು, ತಾವು ಮಾಡಿದ್ದು, ತಪ್ಪು ಮುಂದೆ ಇಂತಹ ಅನಾಹುತ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ದಾಳಿ ಸಂಬಂಧ ತನಿಖೆ ಮುಂದುವರೆಯಲಿದೆ. ಅಂತಾರಾಷ್ಟ್ರೀಯ ನಿಯಮಗಳ ಚೌಕಟ್ಟಿನೊಳಗೆ ನಡೆಯುವ ತನಿಖೆಗೆ ಇರಾನ್ ಸ್ವಾಗತಿಸುತ್ತದೆ ಎಂದು ಈ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ರೂಹಾನಿ ಈ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಇರಾನಿನ ಮತ್ತು ಉಕ್ರೇನಿಯನ್ ತಜ್ಞರ ಜಂಟಿ ತನಿಖೆ ಮುಂದುವರಿಯಲಿದ್ದು, ನ್ಯಾಯಾಂಗ ಕ್ರಮಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಅವರು ಹೇಳಿದರು.
ಬುಧವಾರ, ಉಕ್ರೇನಿಯನ್ ಬೋಯಿಂಗ್ 737 ಪ್ರಯಾಣಿಕರ ವಿಮಾನ ಟೆಹರಾನ್ ಬಳಿ ಅಪಘಾತಕ್ಕೀಡಾಗಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 176 ಪ್ರಯಾಣಿಕರು ಸಾವನ್ನಪ್ಪಿದ್ದರು.