ನ್ಯೂಯಾರ್ಕ್(ಯುಎಸ್):ಮತ್ತೊಂದು ಶಂಕಿತ ದ್ವೇಷ ಅಪರಾಧ ಪ್ರಕರಣದಲ್ಲಿ ಭಾರತೀಯ ಮೂಲಕ ಸಿಖ್ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಿಖ್ ಚಾಲಕನ ಮೇಲೆ ದೈಹಿಕ ದೌರ್ಜನ್ಯ ನಡೆಸಿ, ತಲೆಯಲ್ಲಿದ್ದ ಟರ್ಬನ್ ತೆಗೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಘಟನೆ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಜನವರಿ 4 ರಂದು ನವಜೋತ್ ಪಾಲ್ ಕೌರ್ ಎಂಬ ಮಹಿಳೆ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಏರ್‌ಪೋರ್ಟ್ ಹೊರಭಾಗದಲ್ಲಿ ಸಿಖ್ ಧರ್ಮೀಯ ಟ್ಯಾಕ್ಸಿ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡುತ್ತಿರುವುದು ವೀಡಿಯೊದಲ್ಲಿದೆ. ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ.