ನ್ಯೂಯಾರ್ಕ್:ಉಯಿಘರ್ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಚೀನಾದಲ್ಲಿ ಸ್ಥಾಪಿಸಲಾಗಿದ್ದ ಸಾಮೂಹಿಕ ಬಂಧನ ಶಿಬಿರಗಳನ್ನು ಬಹಿರಂಗಪಡಿಸಿದ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಯಾದ ಪುಲಿಟ್ಜೆರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ತಮಿಳುನಾಡು ಮೂಲದ ಮೇಘಾ ರಾಜಗೋಪಾಲನ್ ಅವರು 'ಬುಜ್ ಫೀಡ್ ನ್ಯೂಸ್' ಎಂಬ ಇಂಟರ್ನೆಟ್ ಮೀಡಿಯಾದಲ್ಲಿ ವರದಿಗಾರ್ತಿಯಾಗಿದ್ದು, ಈ ಪ್ರಶಸ್ತಿಯನ್ನು ತಮಗೆ ಸಹಾಯ ಮಾಡಿದ ಇಬ್ಬರು ಸಹೋದ್ಯೋಗಿಗಳಾದ ಅಲಿಸನ್ ಕಿಲ್ಲಿಂಗ್ ಮತ್ತು ಕ್ರಿಸ್ಟೋ ಬುಸ್ಚೆಕ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಮೇಘಾ ಅವರು ತಮ್ಮ ಸಹೋದ್ಯೋಗಿಗಳ ಜೊತೆ ಸೇರಿ 50,000 ಪ್ರದೇಶಗಳ ಮಾಹಿತಿ ಸಂಗ್ರಹಿಸಿ ಚೀನಾದಲ್ಲಿ ಉಯಿಘರ್ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಬಂಧಿಸಿಟ್ಟಿದ್ದ 260 ಕ್ಯಾಂಪ್ಗಳನ್ನು ಪತ್ತೆ ಮಾಡಿದ್ದಾರೆ. ಈ ಶಿಬಿರಗಳ 12ಕ್ಕೂ ಹೆಚ್ಚು ಮಾಜಿ ಕೈದಿಗಳನ್ನು ಸಂದರ್ಶನ ಮಾಡಿ ಅವರ ನೋವನ್ನು ಬೆಳಕಿಗೆ ತಂದಿದ್ದಾರೆ. ಸುಮಾರು 10 ಲಕ್ಷ ಮುಸ್ಲಿಂರು ಈ ಕ್ಯಾಂಪ್ಗಳಲ್ಲಿ ಇದ್ದಾರೆಂಬ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದರು. ಈ ತನಿಖೆಗಾಗಿ ಇವರು ಸ್ಯಾಟಲೈಟ್ ಇಮೇಜ್ ಹಾಗೂ 3ಡಿ ಆರ್ಕಿಟೆಕ್ಚರಕಲ್ ತಂತ್ರಜ್ಞಾನವನ್ನು ಬಳಸಿದ್ದಾರೆ.
ಅಂತಾರಾಷ್ಟ್ರೀಯ ವರದಿ ವಿಭಾಗದಲ್ಲಿ ಮೇಘಾ ರಾಜಗೋಪಾಲನ್ಗೆ ಪುಲಿಟ್ಜೆರ್ ಪ್ರಶಸ್ತಿ ನೀಡಿದ್ದರೆ, ಪ್ರಾದೇಶಿಕ ವರದಿ ವಿಭಾಗದಲ್ಲಿ ಭಾರತ ಮೂಲದ ಮತ್ತೊಬ್ಬ ಪತ್ರಕರ್ತ ನೀಲ್ ಬೇಡಿ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಮಕ್ಕಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಫ್ಲೋರಿಡಾದ ಕಾನೂನು ಜಾರಿ ಅಧಿಕಾರಿಯೊಬ್ಬರ ಅಪರಾಧವನ್ನು ಬಯಲಿಗೆಳೆದು, ತನಿಖಾ ಕಥೆಗಳನ್ನು ಪ್ರಕಟಿಸಿದ್ದಕ್ಕಾಗಿ ನೀಲ್ ಬೇಡಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.