ಯುನೈಟೆಡ್ ನೇಷನ್ಸ್: ಯುಎನ್‌ನಲ್ಲಿ ಭಾರತೀಯ ಮೂಲದ ಉದ್ಯೋಗಿಯೊಬ್ಬರು ನಾನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಲೆಕ್ಕಪರಿಶೋಧಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅರೋರಾ ಅಕಾಂಕ್ಷಾ (34) ಅವರು ವಿಶ್ವದ ಉನ್ನತ ರಾಜತಾಂತ್ರಿಕ ಹುದ್ದೆಯಾದ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಸಹ ಬಿಡುಗಡೆ ಮಾಡಿದ್ದಾರೆ. ನಾನು ಬದಲಾವಣೆಯ ಪೀಳಿಗೆಯ ಭಾಗವಾಗಿದ್ದೇನೆ, ಅಲ್ಲಿ ನಾವು ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ, ನಾವು ಬದಲಾವಣೆಗೆ ಕಾರಣವಾಗುತ್ತೇವೆ ಎಂದು ಅರೋರಾ ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರು ಆನ್ಲೈನ್ನಲ್ಲಿ #AroraForSG ಎಂಬ ಅಭಿಯಾನ ಕೂಡ ಆರಂಭಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅರೋರಾ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಯುಎನ್ ಪ್ರಧಾನ ಕಚೇರಿಯೊಳಗೆ ಅಕಾಂಕ್ಷಾ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಹಾಗೆಯೇ ಆಕೆ ಮೊದಲು ಬಂದ ಜನರು ಯುಎನ್ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿರುವ ಅವರ ಧ್ವನಿಮುದ್ರಿಕೆ ವಿಡಿಯೋದಲ್ಲಿ ಕೇಳುತ್ತದೆ.
75 ವರ್ಷಗಳಿಂದ, ವಿಶ್ವಸಂಸ್ಥೆ ಜಗತ್ತಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ - ನಿರಾಶ್ರಿತರನ್ನು ರಕ್ಷಿಸಲಾಗಿಲ್ಲ, ಮಾನವೀಯ ನೆರವು ಕಡಿಮೆ ಇದೆ, ಮತ್ತು ತಂತ್ರಜ್ಞಾನ ಮತ್ತು ಆಧುನಿಕತೆಯಲ್ಲಿ ಹಿಂದೆಬಿದ್ದಿದೆ. ಅದಕ್ಕಾಗಿಯೇ ನಾನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ನಾನು ಬೈ-ಸ್ಟ್ಯಾಂಡರ್ ಆಗಲು ನಿರಾಕರಿಸುತ್ತೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.