ವಾಷಿಂಗ್ಟನ್ :ಚುನಾಯಿತ ಅಧ್ಯಕ್ಷ ಜೋ ಬೈಡನ್ ಸೋಮವಾರ ಪ್ರಕಟಿಸಲಿರುವ ಕೊರೊನಾ ವೈರಸ್ ಕಾರ್ಯಪಡೆಗೆ ಭಾರತೀಯ-ಅಮೆರಿಕದ ವೈದ್ಯ ಡಾ.ವಿವೇಕ್ ಮೂರ್ತಿ ಸಹ-ಅಧ್ಯಕ್ಷರಾಗಲಿದ್ದಾರೆ.
ಕರ್ನಾಟಕ ಮೂಲದ 43 ವರ್ಷದ ಮೂರ್ತಿಯವರನ್ನು 2014ರಲ್ಲಿ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ನೇಮಕ ಮಾಡಿದ್ದರು. ಯುಕೆಯಲ್ಲಿ ಜನಿಸಿದ ಅವರು 37ನೇ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಟ್ರಂಪ್ ಆಡಳಿತದಲ್ಲಿ ಹುದ್ದೆಯಿಂದ ಕೆಳಗಿಳಿದರು.
ಶನಿವಾರ ರಾತ್ರಿ ಡೆಲವೇರ್ನ್ ವಿಲ್ಮಿಂಗ್ಟನ್ನಲ್ಲಿ ತಮ್ಮ ವಿಜಯದ ಭಾಷಣ ಮಾಡಿದ ಬೈಡನ್, ಸೋಮವಾರ ಬೈಡೆನ್-ಹ್ಯಾರಿಸ್ ಕೋವಿಡ್ ಅನ್ನು ದಿಟ್ಟವಾಗಿ ಎದುರಿಸಲು ನೀಲನಕ್ಷೆಯನ್ನು ತಯಾರಿಸಲು ಪ್ರಮುಖ ವಿಜ್ಞಾನಿಗಳು ಮತ್ತು ತಜ್ಞರ ಗುಂಪನ್ನು ಪರಿವರ್ತನಾ ಸಲಹೆಗಾರರೆಂದು ಪರಿಗಣಿಸಲಿದ್ದೇನೆ ಎಂದು ಹೇಳಿದರು.
ಬೈಡನ್ ಈ ಯೋಜನೆಯನ್ನು ವಿಜ್ಞಾನದ ತಳಪಾಯದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು. ಕೊರೊನಾ ಟಾಸ್ಕ್ ಫೋರ್ಸ್ ಅಧ್ಯಕ್ಷತೆಯನ್ನು ಮಾಜಿ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಮತ್ತು ಮಾಜಿ ಆಹಾರ ಮತ್ತು ಔಷಧ ಆಡಳಿತ ಆಯುಕ್ತ ಡೇವಿಡ್ ಕೆಸ್ಲರ್ ಅವರು ವಹಿಸಲಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಹೇಳಿದೆ.
ಪ್ರಚಾರದ ಅವಧಿಯಲ್ಲಿ, ಮೂರ್ತಿ ಸಾರ್ವಜನಿಕ ಆರೋಗ್ಯ ಮತ್ತು ಕೊರೊನಾ ವೈರಸ್ ವಿಷಯಗಳ ಬಗ್ಗೆ ಬೈಡನ್ ಅವರ ಉನ್ನತ ಸಲಹೆಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. ಅವರು ಬೈಡನ್ ಆಡಳಿತದಲ್ಲಿ ಆರೋಗ್ಯ ಕಾರ್ಯದರ್ಶಿಯಾಗಬಹುದು ಎಂದು ಸಹ ಹೇಳಲಾಗುತ್ತಿದೆ. ಮೇ ತಿಂಗಳಲ್ಲಿ ಬೈಡನ್ ಅಭಿಯಾನವು ಕಾಂಗ್ರೆಸ್ ವುಮನ್ ಪ್ರಮಿಲಾ ಜಯಪಾಲ್ ಮತ್ತು ಮೂರ್ತಿಯನ್ನು ಹೆಲ್ತ್‌ಕೇರ್ ಟಾಸ್ಕ್ ಫೋರ್ಸ್‌ಗೆ ಸಹ-ಅಧ್ಯಕ್ಷರನ್ನಾಗಿ ನೇಮಿಸಿತ್ತು.