ವಾಷಿಂಗ್ಟನ್(ಅಮೆರಿಕ):ಭಾರತ ಮೂಲದ ವ್ಯಕ್ತಿಗಳು ವಿಶ್ವದಾದ್ಯಂತ ತಮ್ಮ ಪಾರಮ್ಯ ಮೆರೆಯುತ್ತಿದ್ದಾರೆ. ಈಗ ಅಮೆರಿಕದ ಶ್ವೇತಭವನದ ಅಧ್ಯಕ್ಷರ ಸಿಬ್ಬಂದಿಯ ಮುಖ್ಯಸ್ಥರ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕನ್ ಗೌತಮ್ ರಾಘವನ್ ಆಯ್ಕೆಯಾಗಿದ್ದು, ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಕ್ಯಾಥಿ ರಸೆಲ್ ಎಂಬುವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಯುನಿಸೆಫ್‌ನ ಮುಂದಿನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕ್ಯಾಥಿ ರಸೆಲ್ ಅನ್ನು ವಿಶ್ವಸಂಸ್ಥೆಯ ಮಹಾನಿರ್ದೇಶಕ ಆ್ಯಂಟೋನಿಯೋ ಗುಟೆರಸ್ ಆಯ್ಕೆ ಮಾಡಿದ್ದ ಕಾರಣದಿಂದ ಗೌತಮ್ ರಾಘವನ್ ಅವರನ್ನು ಈ ಹುದ್ದೆಗೆ ನಿಯೋಜಿಸಲಾಗಿದೆ. ಇದಕ್ಕೂ ಮೊದಲು ಗೌತಮ್ ರಾಘವನ್ ಶ್ವೇತಭವನದಲ್ಲೇ ಬೇರೊಂದು ಹುದ್ದೆಯಲ್ಲಿದ್ದು, ಈಗ ಅವರಿಗೆ ಬಡ್ತಿ ನೀಡಲಾಗಿದೆ.
ಕ್ಯಾಥಿ ಅವರ ನಾಯಕತ್ವದಲ್ಲಿ, ಅಧ್ಯಕ್ಷೀಯ ಸಿಬ್ಬಂದಿಯ ಶ್ವೇತಭವನದ ಕಚೇರಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದೆ ಎಂದು ಅಧ್ಯಕ್ಷ ಜೋ ಬೈಡನ್ ಶ್ಲಾಘಿಸಿದ್ದು, ಕ್ಯಾಥಿ ಜೊತೆಯಲ್ಲಿ ಕೆಲಸ ಮಾಡಿದ ಗೌತಮ್ ರಾಘವನ್ ಶ್ವೇತಭವನದ ಅಧ್ಯಕ್ಷರ ಸಿಬ್ಬಂದಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.