ವಾಷಿಂಗ್ಟನ್, ಅಮೆರಿಕ:ಭಾರತ ಮತ್ತು ಅಮೆರಿಕ ಸಹಜ ಪಾಲುದಾರರು ಎಂದು ಪ್ರಧಾನಿ ಎಂದು ಹೇಳಿದ್ದು, ಎರಡೂ ದೇಶಗಳ ನಡುವೆ ಸಮನ್ವಯ ಮತ್ತು ಸಹಕಾರವೂ ಹೆಚ್ಚುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಿಯೋಗ ಮಟ್ಟದ ಮಾತುಕತೆಗೆ ಮುಂಚಿತವಾಗಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಧಾನಿ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸುವ ವೇಳೆ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಅಮೆರಿಕ ಅತ್ಯಂತ ಹಳೆಯ ಪ್ರಜಾಪ್ರಭುತ್ವವನ್ನು ಹೊಂದಿವೆ. ಎರಡೂ ರಾಷ್ಟ್ರಗಳಲ್ಲಿ ಒಂದೇ ರೀತಿಯ ಮೌಲ್ಯಗಳು, ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿವೆ. ಎರಡೂ ದೇಶಗಳ ನಡುವಿನ ಸಮನ್ವಯ ಮತ್ತು ಸಹಕಾರವೂ ಹೆಚ್ಚುತ್ತಿದೆ.
ಅಮೆರಿಕದಲ್ಲಿ ಭಾರತೀಯ ಮೂಲದ 4 ಮಿಲಿಯನ್ಗೂ ಹೆಚ್ಚು ಜನರಿದ್ದಾರೆ. ಈ ಭಾರತೀಯ ಸಮುದಾಯವು ಎರಡು ದೇಶಗಳ ಸೇತುವೆಯಾಗಿದೆ. ಎರಡೂ ದೇಶಗಳ ಆರ್ಥಿಕತೆ ಮತ್ತು ಸಮಾಜಕ್ಕೆ ಅವರ ಕೊಡುಗೆ ನಿಜಕ್ಕೂ ಪ್ರಶಂಸನೀಯ ಎಂದು ಮೋದಿ ಹೇಳಿದರು.
ಕಮಲಾ ಹ್ಯಾರಿಸ್‌ರೊಂದಿಗೆ ಪ್ರಧಾನಿ ಮೋದಿಯವರ ಮೊದಲ ವೈಯಕ್ತಿಕ ಭೇಟಿ ಇದಾಗಿದ್ದು, ಕೋವಿಡ್ ಎರಡನೇ ಅಲೆಯ ವೇಳೆ ಅಮೆರಿಕ ನೀಡಿದ್ದ ಸಹಾಯವನ್ನು ಸ್ಮರಿಸಿದ್ದಾರೆ. ಇದನ್ನು ಭಾರತ ಎಂದಿಗೂ ನೆನೆಯುತ್ತಲೇ ಇರುತ್ತದೆ ಎಂದು ಅಮೆರಿಕಕ್ಕೆ ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.