ಕರ್ನಾಟಕ

karnataka

ETV Bharat / international

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್​ ವಿರುದ್ಧ ಗುಡುಗಿದ ಭಾರತ - ಜಮ್ಮು ಕಾಶ್ಮೀರ ಭಾಗದ ಗಡಿಯಲ್ಲಿ ಮತ್ತೆ ತಂಟೆ

ಪಾಕಿಸ್ತಾನದ ಕರ್ತಾರ್​​​​​ಪುರ್​ನ ಗುರುದ್ವಾರ ಆಡಳಿತ ಮಂಡಳಿಯನ್ನು ಏಕಪಕ್ಷೀಯ ನಿರ್ಧಾರದೊಂದಿಗೆ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್​​ನ ಆಡಳಿತಕ್ಕೆ ನೀಡಿರುವ ಪಾಕ್​​​ನ ಆದೇಶಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಭಾರತ ಅಸಮಾಧಾನ ಹೊರಹಾಕಿದೆ. ಸಿಖ್​ ಧರ್ಮೀಯರ ಧಾರ್ಮಿಕ ಭಾವನೆಗೆ ಪಾಕ್​ ಧಕ್ಕೆ ತಂದಿದೆ ಎಂದು ಆರೋಪಿಸಿದೆ.

india-slams-pak-in-united-nations-general-assembly-meet
ಭಾರತೀಯ ವಕ್ತಾರ ಆಶಿಶ್ ಶರ್ಮಾ

By

Published : Dec 3, 2020, 10:10 AM IST

ನ್ಯೂಯಾರ್ಕ್: ಜಮ್ಮು ಕಾಶ್ಮೀರ ಭಾಗದ ಗಡಿಯಲ್ಲಿ ಮತ್ತೆ ತಂಟೆ ತೆಗೆದಿರುವ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಅಸಮಾಧಾನ ಹೊರಹಾಕಿದೆ. ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯ ‘ಶಾಂತಿಯ ಸಂಸ್ಕೃತಿ’ ಅಧಿವೇಶದಲ್ಲಿ ಪಾಕಿಸ್ತಾನವು ಅಲ್ಪಸಂಖ್ಯಾತರಿಗೆ ಬೆದರಿಕೆ, ಮತಾಂತರ ಮತ್ತು ಹತ್ಯೆ ಮಾಡಿ ಬಲವಂತದಿಂದ ಓಡಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ.

ವಿಶ್ವಸಂಸ್ಥೆಯು ಕಳೆದ ವರ್ಷ ನಡೆಸಿದ್ದ ‘ಶಾಂತಿಯ ಸಂಸ್ಕೃತಿ’ ಸಭೆಯಲ್ಲಿ ಅಂಗೀಕರಿಸಿದ್ದ ನಿರ್ಣಯವನ್ನು ಪಾಕಿಸ್ತಾನ ಈಗಾಗಲೇ ಉಲ್ಲಂಘಿಸಿದೆ. ಕಳೆದ ತಿಂಗಳಲ್ಲಿ ಪಾಕಿಸ್ತಾನವು ಸಿಖ್ಖರ ಪವಿತ್ರ ಯಾತ್ರಾ ಸ್ಥಳ ಕರ್ತಾರ್​​ಪುರ್​​​​ ಸಾಹಿಬ್​ ಗುರುದ್ವಾರವನ್ನು ಆ ಸಮುದಾಯದವರ ಬದಲಿಗೆ ಸಿಖ್ ರಹಿತ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್‌ನ ಸಮುದಾಯಕ್ಕೆ ಅದರ ಆಡಳಿತವನ್ನು ವರ್ಗಾಯಿಸಿತ್ತು.

ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದ ಭಾರತ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿ, ಕರ್ತಾರ್‌ಪುರ್ ಸಾಹಿಬ್‌ನ ನಿರ್ವಹಣೆಯನ್ನು ವರ್ಗಾವಣೆ ಮಾಡುವ ಇಸ್ಲಾಮಾಬಾದ್‌ನ ಏಕಪಕ್ಷೀಯ ನಿರ್ಧಾರವನ್ನು ಬಲವಾಗಿ ಖಂಡಿಸಿದೆ.

ಪಾಕಿಸ್ತಾನವು ಭಾರತದಲ್ಲಿನ ಧರ್ಮಗಳ ವಿರುದ್ಧದ ದ್ವೇಷ ಹರಡದೆ ಮತ್ತು ಗಡಿಯಲ್ಲಿನ ಭಯೋತ್ಪಾದನೆ ಬೆಂಬಲಿಸುವುದನ್ನು ನಿಲ್ಲಿಸಿದರೆ ದಕ್ಷಿಣ ಏಷ್ಯಾದಲ್ಲಿ ನಿಜವಾದ ಶಾಂತಿಯನ್ನು ನಾವು ಬಯಸಬಹುದು ಎಂದು ಭಾರತೀಯ ರಾಜತಾಂತ್ರಿಕ ವಕ್ತಾರ ಆಶಿಶ್ ಶರ್ಮಾ ಸಭೆಯಲ್ಲಿ ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯ ವಕ್ತಾತ (ಎಂಇಎ) ಅನುರಾಗ್ ಶ್ರೀವಾಸ್ತವ ಅವರು, ಕರ್ತಾರ್​​​ಪುರ್​​ನ ಸಿಖ್ ಪವಿತ್ರ ಸ್ಥಳದ ಆಡಳಿತ ಮಂಡಳಿಯಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಅತ್ಯಂತ ಖಂಡನೀಯ. ಇದು ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ನ ಮನೋಭಾವಕ್ಕೆ ವಿರುದ್ಧವಾದ ನಡೆಯಾಗಿದೆ ಮತ್ತು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಲಿದೆ ಎಂದಿದ್ದಾರೆ.

ABOUT THE AUTHOR

...view details