ವಿಶ್ವಸಂಸ್ಥೆ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಸಾವು ನೋವಿನ ಪ್ರಕರಣಗಳು ಹೆಚ್ಚಿವೆ. ಯುರೋಪಿನಲ್ಲೇ ಅತ್ಯಂತ ದೊಡ್ಡ ಅಣು ಸ್ಥಾವರವಾದ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಶುಕ್ರವಾರದಂದು ರಷ್ಯಾ ಪಡೆಗಳು ದಾಳಿ ನಡೆಸಿದ್ದು, ಈ ಬಗ್ಗೆ ಭಾರತ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಉಕ್ರೇನ್ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ ಎಂದು ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಆನ್‌ಲೈನ್ ಪೋಸ್ಟ್‌ವೊಂದರಲ್ಲಿ ನಿನ್ನೆ ಮಾಹಿತಿ ನೀಡಿದ್ದಾರೆ. ಈ ದಾಳಿಯಲ್ಲಾದ ಅಪಾರ ಸಾವು ನೋವಿನ ಬಗ್ಗೆಯೂ ತಿಳಿಸಿದ್ದಾರೆ. ಇದಕ್ಕೂ ಮೊದಲು ರಷ್ಯಾ ಪಡೆಗಳು ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ರಷ್ಯಾ ಪಡೆಗಳು ಟ್ಯಾಂಕ್ಗಳೊಂದಿಗೆ ಝಪೋರಿಝಿಯಾ ಪ್ರವೇಶಿಸಿವೆ ಎಂದು ಹೇಳಲಾಗಿತ್ತು. ಅದರಂತೆ ನಿನ್ನೆ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ತೀವ್ರ ಶೆಲ್ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದ್ದು, ಅಮೆರಿಕ ಸೇರಿ ಅನೇಕ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದೆ.
ಪರಮಾಣು ಕೇಂದ್ರದ ಮೇಲೆ ರಷ್ಯಾದ ದಾಳಿಯ ನಂತರ, ಪರಮಾಣು ಸ್ಥಾವರಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚು ಒತ್ತು ನೀಡುವುದಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಶುಕ್ರವಾರ ಹೇಳಿದೆ. ಅಲ್ಲಿನ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ ಎಂದು ಇದೇ ವೇಳೆ ವಿಷಾದಿಸಿದೆ.