ನ್ಯೂಯಾರ್ಕ್ (ಅಮೆರಿಕ): ಯಾರೇ ಆಗಲಿ, ಎಲ್ಲಿಯೇ ಆಗಲಿ, ಯಾವುದೇ ಸಮಯದಲ್ಲಾಗಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಬಾರದು. ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯನ್ನು ನಾವು ವಿರೋಧಿಸುತ್ತೇವೆ, ಪ್ರತಿಯೊಬ್ಬರೂ ರಾಸಾಯನಿಕ ಶಸ್ತ್ರಾಸ್ತ್ರಗಳ ನಿಬಂಧನೆಗಳನ್ನು ಅನುಸರಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಹೇಳಿದೆ.
ಸಿರಿಯಾ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಡೆಸಿದ ಸಂವಾದದಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ - ವಿಶ್ವಸಂಸ್ಥೆಯ ರಾಜಕೀಯ ಸಂಯೋಜಕ ಆರ್.ರವೀಂದ್ರ ಮಾತನಾಡಿದರು. ರಾಸಾಯನಿಕ ಶಸ್ತ್ರಾಸ್ತ್ರ ಸಮಾವೇಶವು (ಸಿಡಬ್ಲ್ಯೂಸಿ) ಒಂದು ವಿಶಿಷ್ಟವಾದ ತಾರತಮ್ಯ ರಹಿತ ನಿಶ್ಯಸ್ತ್ರೀಕರಣವಾಗಿದೆ. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ (ಡಬ್ಲ್ಯುಎಂಡಿ) ಸಂಪೂರ್ಣ ನಿರ್ಮೂಲನೆಗೆ ಇದು ಒಂದು ಮಾದರಿ ಎಂದರು.