ನವದೆಹಲಿ:ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ವಿಚಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನಕ್ಕೆ ಭಾರತ ಶನಿವಾರ ಗೈರು ಹಾಜರಾಗಿದೆ. ನಿರೀಕ್ಷೆಯಂತೆ ಚೀನಾ ಕೂಡಾ ರಷ್ಯಾದ ವಿರುದ್ಧ ಮತದಾನದಿಂದ ದೂರ ಉಳಿದಿದೆ.
ಯುಎನ್‌ಎಸ್‌ಸಿ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಹಿಂಸಾಚಾರ ಮತ್ತು ದ್ವೇಷವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಭಾರತವು ಒತ್ತಾಯಿಸಿದ್ದು, ವಿವಾದಗಳನ್ನು ಇತ್ಯರ್ಥ ಮಾಡಲು ಮಾತುಕತೆಯೊಂದೇ ದಾರಿ ಎಂದಿದೆ.
ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಪ್ರತಿನಿಧಿಯಾದ ಟಿ ಎಸ್ ತಿರುಮೂರ್ತಿ ಮಾತನಾಡಿ, ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ವಿಚಲಿತವಾಗಿದೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯೊಂದೇ ಉತ್ತರವಾಗಿದೆ ಎಂದು ಹೇಳಿದ್ದಾರೆ.