ವಾಷಿಂಗ್ಟನ್:ಉಕ್ರೇನ್ ಮೇಲೆ ರಷ್ಯಾ ದಾಳಿ ಬಗ್ಗೆ ಭಾರತದ ಜೊತೆ ಮಾತುಕತೆ ನಡೆಸಲಾಗುವುದು, ಈ ಕುರಿತ ವಿಚಾರ ಇನ್ನೂ ಬಗೆಹರಿದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಭಾರತವು ಅಮೆರಿಕದ ರಕ್ಷಣಾ ವಲಯದ ದೊಡ್ಡ ಭಾಗಿದಾರ ದೇಶವಾಗಿದೆ. ಉಕ್ರೇನ್ ವಿಚಾರದಲ್ಲಿ ಭಾರತ ಸಂಪೂರ್ಣವಾಗಿ ನಿಮ್ಮೊಂದಿಗೆ ಇದೆಯೇ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಬೈಡನ್, ಈ ಕುರಿತ ವಿಚಾರಗಳು ಇನ್ನೂ ಬಗೆಹರಿದಿಲ್ಲ, ನಾವು ಭಾರತದ ಜೊತೆಗೆ ಇಂದು ಮಾತುಕತೆ ನಡೆಸುತ್ತೇವೆ ಎಂದರು.
ಉಕ್ರೇನ್ ಮೇಲಿನ ರಷ್ಯಾ ದಾಳಿಯು ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ಯುದ್ಧವಾಗಿದೆ. ರಷ್ಯಾದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರಲಾಗುವುದು ಎಂದು ಬೈಡನ್ ಇದಕ್ಕೂ ಮುನ್ನ ತಿಳಿಸಿದರು.
ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಯುದ್ಧವನ್ನು ನಿಲ್ಲಿಸುವಂತೆ ಕೋರಿದ್ದಾರೆ. ಅಲ್ಲದೇ, ಹಿಂಸಾಚಾರವನ್ನು ನಿಲ್ಲಿಸಿ, ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ವಿದೇಶಾಂಗ ಸಚಿವರ ಮಾತುಕತೆ:ಈ ಮಧ್ಯೆಯೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳ ಕುರಿತು ಮಾತುಕತೆ ನಡೆಸಿದ್ದಾರೆ.