ವಾಷಿಂಗ್ಟನ್ (ಅಮೆರಿಕ):ಶತಾಯ ಗತಾಯ ಪ್ರಯತ್ನದ ನಂತರವೂ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಗಾದಿ ಹಿಡಿಯುವಲ್ಲಿ ವಿಫಲಾರಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ವಾಗ್ದಂಡನೆ ಎಂಬುದು ಶನಿ ಹೆಗಲೇರಿದಂತಾಗಿದೆ. ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೂ ಸಹ, ವಾಗ್ದಂಡನೆ ಎಂಬ ತೂಗುಗತ್ತಿ ಟ್ರಂಪ್ ತಲೆ ಮೇಲೆ ನೇತಾಡುತ್ತಲೇ ಇದೆ.
ಜನವರಿ 6ರಂದು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದ ಮೇಲೆ ನಡೆಸಿದ ದಾಳಿಯೇ ಟ್ರಂಪ್‌ರನ್ನು ದೋಷಾರೋಪಣೆಗೆ ಒಳಪಡಿಸಲು ಪ್ರಮುಖ ಕಾರಣ ಎನ್ನಲಾಗಿದೆ. ಈ ಎಲ್ಲದರ ನಡುವೆ, ಡೊನಾಲ್ಡ್ ಟ್ರಂಪ್ ಹಲವಾರು ಬಾರಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ (ಅಮೆರಿಕ ಸಂಸತ್ತಿನ ಕೆಳಮನೆ) ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಅಂಗೀಕರಿಸಲು ಮುಂದಾಗಿದ್ದು, ಈ ವೇಳೆ ಟ್ರಂಪ್ ಪರ ವಕೀಲ ಮೈಕೆಲ್ ವ್ಯಾನ್ ಡೆರ್ ವೀನ್, ಟ್ರಂಪ್‌ರನ್ನು ದೋಷಾರೋಪಣೆಗೆ ಒಳಪಡಿಸುವುದರಲ್ಲಿ ಯಾವುದೇ ಹುರುಳಿಲ್ಲ, ಇದು ಡೆಮಾಕ್ರಟಿಕ್ ಪಕ್ಷ ಅವರ ಮೇಲೆ ದ್ವೇಷ ತೀರಿಸಿಕೊಳ್ಳಲು ಮಾಡುತ್ತಿರುವ ಕಾರ್ಯವಾಗಿದೆ ಎಂದು ಸೆನೆಟ್ನಲ್ಲಿ ಹೇಳಿದ್ದಾರೆ.
ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಗೂ ಮುಂಚಿತವಾಗಿಯೇ ಡೆಮೊಕ್ರಾಟ್ ಪಕ್ಷದವರು ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ದ್ವೇಷದ ಅಭಿಯಾನ ನಡೆಸುತ್ತಿದ್ದರು. ಸಂದರ್ಭಕ್ಕೆ ಸರಿಯಾದಂತೆ ಜನವರಿ 6ರಂದು ಅದೊಂದು ದಾಳಿ ನಡೆದಿದ್ದು, ಡೆಮೊಕ್ರಾಟ್ಗಳು ಅಲ್ಲಿ ನಡೆದ ಸನ್ನಿವೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ಕೆಲವೇ ಕೆಲವು ವಿಡಿಯೋ ತುಣುಕುಗಳನ್ನು ತೋರಿಸುವ ಮೂಲಕ ಡೆಮೊಕ್ರಾಟ್ ಪಕ್ಷವು ಟ್ರಂಪ್ ವಿರುದ್ಧ ಆಪಪ್ರಚಾರವೆಸಗಿದೆ ಎಂದಿದ್ದಾರೆ.
ಟ್ರಂಪ್ ಅವರ ನೇರ, ದಿಟ್ಟ ಮಾತುಗಳು ಹಾಗೂ ಅತಿಯಾದ ವಾಕ್ಚಾತುರ್ಯ ಡೆಮಾಕ್ರಟಿಕರ ಹೊಟ್ಟೆ ಕಿಚ್ಚಿಗೆ ಕಾರಣವಾಗಿತ್ತು. ಮೊದಲಿನಿಂದಲೂ ಟ್ರಂಪ್ ವಿರುದ್ದ ಕಿಡಿಕಾರುತ್ತಿದ್ದ ಅವರು, ಹೇಗಾದರೂ ಮಾಡಿ ಅಧ್ಯಕ್ಷ ಗಾದಿಯನ್ನು ಟ್ರಂಪ್ರಿಂದ ಕಿತ್ತುಕೊಳ್ಳಬೇಕೆಂದು ಹೊಂಚು ಹಾಕಿದ್ದರು. ಅದಲ್ಲದೆ ದೋಷಾರೋಪಣೆ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಸಹ ಟ್ರಂಪ್ ಸ್ಪರ್ಧಿಸಬಾರದು ಎಂಬ ಹುನ್ನಾರ ಅವರದ್ದಾಗಿದೆ ಎಂದು ಡೆಮಾಕ್ರಟಿಕ್ ಸದಸ್ಯರ ವಿರುದ್ದ ವಕೀಲ ಮೈಕೆಲ್ ವ್ಯಾನ್ ಡೆರ್ ವೀನ್ ಕಿಡಿಕಾರಿದ್ದಾರೆ.