ವಾಷಿಂಗ್ಟನ್, ಅಮೆರಿಕ:ಒಂದು ವೇಳೆ ಚೀನಾ ತನ್ನ ಪಕ್ಕದ ತೈವಾನ್ ಆಕ್ರಮಿಸಿಕೊಂಡರೆ ಬೇರೆಲ್ಲಾ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಷ್ಟು ಬಲಶಾಲಿಯಾಗುತ್ತದೆ ಎಂದು ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ಅಮೆರಿಕ ರಾಜಕಾರಣಿ ನಿಕ್ಕಿ ಹ್ಯಾಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕದ ಡಿಜಿಟಲ್ ಮಾಧ್ಯಮ ದ ಹಿಲ್ ವರದಿ ಮಾಡಿದೆ.
ಕ್ಯಾಪಿಟಲ್ನಲ್ಲಿ ನಡೆದ ರಿಪಬ್ಲಿಕ್ ಸ್ಟಡಿ ಕಮಿಟಿ (ಆರ್ಎಸ್ಸಿ)ಯ ಸದಸ್ಯರ ಸಭೆಯಲ್ಲಿ ಬುಧವಾರ ಮಾತನಾಡಿದ ನಿಕ್ಕಿ ಹ್ಯಾಲೆ, ಚೀನಾದ ವಿರುದ್ಧ ಅಮೆರಿಕ ಕಠಿಣವಾಗಿರಬೇಕು ಎಂದು ಒತ್ತಾಯಿಸಿದ್ದಾರೆ. ತೈವಾನ್ ಚೀನಾ ಕೈವಶವಾದರೆ ಜಗತ್ತಿನ ಹಲವು ದೇಶಗಳು ಚೀನಾದ ಅಕ್ರಮಣಕ್ಕೆ ಒಳಗಾಗಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2022ರ ಚಳಿಗಾಲದ ಒಲಿಂಪಿಕ್ ಚೀನಾದಲ್ಲಿ ನಡೆಯಲಿದ್ದು, ಈ ಒಲಿಂಪಿಕ್ ಅಮೆರಿಕ ಬಹಿಷ್ಕರಿಸಬೇಕು. ಒಂದು ವೇಳೆ ನಾವು ಒಲಿಂಪಿಕ್ ಬಹಿಷ್ಕರಿಸಲು ಕರೆ ನೀಡದಿದರೆ, ಅದು ತಪ್ಪಾಗುತ್ತದೆ. ನನ್ನ ಮಾತನ್ನು ನೆನಪಿಡಿ, ತೈವಾನ್ ಚೀನಾದ ವಶಕ್ಕೆ ಬಂದರೆ ಅದು ಮುಂದಿನ ದಿನಗಳಲ್ಲಿ ಜಗತ್ತಿನ ಎಲ್ಲಿಗೆ ಬೇಕಾದರೂ ತೆರಳಿ, ಯಾವುದೇ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಸನ್ನದ್ಧವಾಗುತ್ತದೆ ಎಂದಿದ್ದಾರೆ.
ಚೀನಾ ತನ್ನನ್ನು ತಾನು ಜಗತ್ತಿಗೆ ಪರಿಚಯಿಸಿಕೊಳ್ಳುತ್ತಿದೆ. ಚಳಿಗಾಲದ ಒಲಿಂಪಿಕ್ ಆಯೋಜಿಸಿ ತಾನು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂದು ಹೇಳಿಕೊಳ್ಳುತ್ತದೆ ಎಂದು ನಿಕ್ಕಿ ಹ್ಯಾಲೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಭಾರತದ ಸಿಖ್ ಯಾತ್ರಿಗಳಿಗೆ ಅನುಮತಿ ನಿರಾಕರಿಸಿದ ಪಾಕ್ ಸರ್ಕಾರ